×
Ad

ಉರಿಗಿಲಿ ಹಾಲು ಉತ್ಪಾದಕರ ಸಂಘದಲ್ಲಿ ಲಕ್ಷಾಂತರ ರೂ. ಅವ್ಯವಹಾರ: ಆರೋಪ

Update: 2019-03-06 18:21 IST

ಕೋಲಾರ,ಮಾ.6: ಅಧಿಕಾರಕ್ಕಾಗಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ದುರುಪಯೋಗ ಪಡಿಸಿ, ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸಿದ್ದಾರೆನ್ನಲಾದ ಘಟನೆ ತಾಲೂಕಿನ ಸುಗಟೂರು ಹೋಬಳಿಯ ಉರಿಗಿಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬೆಳಕಿಗೆ ಬಂದಿದ್ದು, ಅಕ್ರಮ ಎಸಗಿರುವ ಆರೋಪಿಗಳಾದ ಅಧ್ಯಕ್ಷ ಎಸ್.ಆರ್.ರುದ್ರಸ್ವಾಮಿ ಮತ್ತು ಕಾರ್ಯದರ್ಶಿ ಬಿ.ಎನ್.ರಮೇಶ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 

ಉರಿಗಿಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 282 ಜನ ಶೇರುದಾರರಿದ್ದು, ಸಂಘದ ನಿಯಮಾನುಸಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ವರ್ಷಕ್ಕೆ 180 ದಿನಗಳಲ್ಲಿ 500 ಲೀ. ಹಾಲು ಪೂರೈಕೆ ಮಾಡಿರಬೇಕು. ಆದರೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದಿರುವ ಅಧ್ಯಕ್ಷರು ಸಂಘದ ದಾಖಲೆಗಳಲ್ಲಿ ಅಕ್ರಮ ಎಸಗಿ ಅರ್ಹರಲ್ಲದವರನ್ನು ಮತಚಲಾವಣೆ ಹಕ್ಕು ನೀಡಿ ಅರ್ಹರನ್ನು ಮತ ಚಲಾವಣೆಯಿಂದ ದೂರವಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ 65 ಜನ ಮತದಾನ ಮಾಡುವ ಹಕ್ಕುದಾರಿಕೆ ಪಡೆದಿದ್ದರು, ಅವರಿಂದ ಸಂಘದ ರುದ್ರಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಚುನಾವಣೆಯಲ್ಲಿ ಸೋತ ಸದಸ್ಯರ ಲೆಕ್ಕಾಚಾರದ ಪ್ರಕಾರ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಬಂದು ಹಾಲು ಒಕ್ಕೂಟದಲ್ಲಿ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ, ನಿಯಮಾನುಸಾರ 180 ದಿನಗಳಲ್ಲಿ 500 ಲೀ. ಹಾಲು ಪೂರೈಕೆ ಮಾಡದ 6 ಜನ ಅನರ್ಹ ಸದಸ್ಯರನ್ನು ತಪ್ಪು ಅಂಕಿ ಅಂಶಗಳನ್ನು ಕೊಟ್ಟು ಅರ್ಹವಾಗಿಸಿ ಚುನಾವಣೆಗೆ ಅನುಕೂಲವಾಗುವಂತೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. 

ಸರ್ಕಾರ ಹಾಲು ಪೂರೈಸುವ ಪ್ರತಿಯೊಬ್ಬರಿಗೂ ರೂ.5 ಪ್ರೋತ್ಸಾಹ ಧನ ನೀಡುತ್ತಿದೆ. ಹಾಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹೆಚ್ಚುವರಿ ಹಾಲನ್ನು ಬೇರೆಯವರ ಹೆಸರಿನಲ್ಲಿ ಪೂರೈಸಿ ಅದರ ದುಡ್ಡು ಮತ್ತು ಪ್ರೋತ್ಸಾಹ ಧನ ಎರಡನ್ನೂ ಲಪಟಾಯಿಸಿದ್ದಾರೆ. ವಾಸ್ತವವಾಗಿ ರುದ್ರಸ್ವಾಮಿಯವರು ಡೇರಿಗೆ ಹಾಲು ಸರಬರಾಜು ಮಾಡುತ್ತಿಲ್ಲವೆಂಬುದು ಗ್ರಾಮಸ್ಥರ ಆರೋಪ. ಕಳೆದ 15 ವರ್ಷಗಳಿಂದ ಅಧ್ಯಕ್ಷರಾಗಿರುವ ರುದ್ರಸ್ವಾಮಿ ಮತ್ತು ಕಾರ್ಯದರ್ಶಿ ರಮೇಶ್ ಬೇನಾಮಿ ಹೆಸರುಗಳನ್ನು ಚುನಾವಣೆಯಲ್ಲಿ ಮತ ಚಲಾವಣೆಗೆ ಅರ್ಹರಾಗಿಸಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಅಕ್ರಮವಾಗಿ ಅಧಿಕಾರ ಚುಕ್ಕಾಣಿ ಹಿಡಿದು ಸಂಘ ದ್ರೋಹ ವೆಸಗಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಮತ್ತು ನಿರ್ದೆಶಕರು ಆರೋಪಿಸಿದ್ದಾರೆ. 

ಇಷ್ಟೇ ಅಲ್ಲದೆ ಸಂಘದ ಕಾರ್ಯದರ್ಶಿ ರಮೇಶ್ ತನ್ನ ಅಣ್ಣನಾದ ನಾರಾಯಣಸ್ವಾಮಿ 2017 ರಿಂದ 2018 ರವರೆಗೆ 32 ಲೀ.ಹಾಲು ಪೂರೈಸಿರುವ ಬಗ್ಗೆ ದಾಖಲೆ ನೀಡಿರುತ್ತಾರೆ, ಆದರೆ ಒಕ್ಕೂಟದಿಂದ ಕೊಟ್ಟಿರುವ 5. ರೂ. ಸಹಾಯಧನ ಪಟ್ಟಿಯಲ್ಲಿ 1742 ಲೀಟರ್ ಗೆ ಸಹಾಯಧನ ಅಕ್ರಮವಾಗಿ ಪಡೆದಿರುತ್ತಾರೆ. ಹಾಲಿ ಅಧ್ಯಕ್ಷರಾದ ರುದ್ರಸ್ವಾಮಿ 2017-18 ನೇ ಸಾಲಿನಲ್ಲಿ ಡೈರಿ ಕಾರ್ಯದರ್ಶಿ ದಾಖಲೆಗಳಲ್ಲಿ 1703 ಲೀ. ಹಾಲು ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಆದರೆ ಸಹಾಯಧನ ಪಟ್ಟಿಯಲ್ಲಿ ರುದ್ರಸ್ವಾಮಿ ಹೆಸರೇ ಇಲ್ಲದಿರುವುದು ಕಂಡುಬಂದಿದೆ. ಇನ್ನೂ ಡೈರಿಯಲ್ಲಿ ಕೆಲಸ ಮಾಡುವ ಹಾಲು ಪರಿವೀಕ್ಷಕ ಚೌಡಪ್ಪ ಹೆಸರಿನಲ್ಲಿ 1028 ಲೀಟರ್ ಹಾಲು ಪೂರೈಸಿದಂತೆ ದಾಖಲೆಗಳನ್ನು ಸೃಷ್ಟಿಸಿ ಹಾಲಿನ ಹಣವನ್ನು ಮತ್ತು ಒಕ್ಕೂಟದ ಸಹಾಯ ಧನವನ್ನು ಲಪಟಾಯಿಸಿದ್ದಾರೆ ಎಂದು ದೂರಲಾಗಿದೆ.

ಒಟ್ಟಾರೆ, ಹಾಲು ಪೂರೈಕೆ ಮಾಡದವರನ್ನು ಸಂಘದ ಸದಸ್ಯರನ್ನಾಗಿಸಿ ಅವರಿಗೆ ಮತದಾನದ ಹಕ್ಕು ಬರುವಂತೆ ದಾಖಲೆ ಸೃಷ್ಟಿಸಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಲ್ಲದೆ, ನಿಯಮ ಬಾಹಿರವಾಗಿ ಡೇರಿಯಲ್ಲಿ ಕೆಲಸ ಮಾಡುವ ಪರಿವೀಕ್ಷಕ ಹಾಗೂ ಕಾರ್ಯದರ್ಶಿ ಅವರ ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಹಾಲು ಪೂರೈಸಿ ಹಾಲಿನ ಹಣ, ಡೇರಿಯ ಲಾಭದ ಹಣ ಮತ್ತು ಸರ್ಕಾರದ ಪ್ರೋತ್ಸಾಹ ಧನವನ್ನು ಕಬಳಿಸಿದ್ದಾರೆನ್ನಲಾಗಿದೆ.

ಕಳೆದ 15 ವರ್ಷಗಳಿಂದ ನುಂಗಿ ನೀರು ಕುಡಿದಿರುವ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಕೂಡಲೇ ಪದಚ್ಯುತಿಗೊಳಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಗ್ರಾಮಸ್ಥರು ಸಂಘದ ಕಚೇರಿಗೆ ಬೀಗ ಜಡಿದು ಜಾನುವಾರುಗಳನ್ನು ಕಟ್ಟಿಹಾಕಿ ಪ್ರತಿಭಟನೆ ನಡೆಸಿ ಸಹಕಾರ ಸಂಘಗಳ ಉಪನಿಬಂಧಕರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆಯ ನೇತೃತ್ವವನ್ನು ಉರಿಗಿಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮೇಡಿಹಾಳ ಮುನಿಆಂಜಿನಪ್ಪ, ಸಂಘದ ಸದಸ್ಯರಾದ  ಮೋಹನ್, ಬಿ.ನಾರಾಯಣಸ್ವಾಮಿ, ಪದ್ಮಮ್ಮ, ಅರುಣಮ್ಮ, ಹನುಮಪ್ಪ, ಚಂದ್ರಶೇಖರ್, ಎತ್ತುಗಳಪ್ಪನವರ ನಾಗಸ್ವಾಮಿ ವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News