"ಉ.ಪ್ರದೇಶ ಸಿಎಂ ಕುಂಕುಮ ಬಳಿದುಕೊಳ್ಳುತ್ತಾರೆ, ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್‌ಗಳಿವೆ"
ಬೆಂಗಳೂರು, ಮಾ. 6: ‘ಕುಂಕುಮ, ಕಾವಿ ಹಾಕಿಕೊಂಡವರನನ್ನು ಜನತೆ ಸಂಶಯ- ಭಯದಿಂದ ನೋಡುವಂತಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕುಂಕುಮ ನಾಮ, ಕಾವಿ ಬಟ್ಟೆಗಳೆಲ್ಲ ಭಾರತೀಯ ಧಾರ್ಮಿಕ ಪರಂಪರೆಯ ಭಾಗ, ಅದಕ್ಕೊಂದು ಪಾವಿತ್ರವಿತ್ತು. ಆದರೆ, ಯಾವಾಗ ಬಿಜೆಪಿಯ ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅನಂತರ ಕುಂಕುಮ ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.
‘ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್‌ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು. ಏನಿವಾಗ?’ ಎಂದು ಸಿದ್ದರಾಮಯ್ಯ ಮತ್ತೊಂದು ಟ್ವಿಟ್‌ನಲ್ಲಿ ಪ್ರಶ್ನಿಸಿದ್ದಾರೆ.
‘ಉತ್ತರ ಪ್ರದೇಶದಲ್ಲೊಬ್ಬರು ಬಿಜೆಪಿ ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖ ತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್‌ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
‘ನಾನು ಬಿಜೆಪಿ ನಾಯಕರಿಗಿಂತ ಒಳ್ಳೆಯ ಹಿಂದು. ನಾನೆಂದೂ ಅವರಂತೆ ತಿಲಕ, ಕಾವಿ, ಧರ್ಮಗಳನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿಲ್ಲ. ನನ್ನದು ಜನಪರ ರಾಜಕಾರಣ, ದೇವರು, ಧರ್ಮ ಎಲ್ಲ ನನ್ನ ಮನೆಯೊಳಗಿನ ನಂಬಿಕೆ’ ಎಂದು ಸಿದ್ದರಾಮಯ್ಯ ಸರಣಿ ಟ್ವಿಟ್ ಮಾಡಿದ್ದಾರೆ.