ನಿತ್ಯ ಮೈಕ್, ಹಸಿರು ಧ್ವಜ ಹಚ್ಚುವುದರ ಹಿಂದಿನ ಉದ್ದೇಶ ಏನು?: ಸಂಸದ ಸುರೇಶ್ ಅಂಗಡಿ

Update: 2019-03-06 14:34 GMT

ಬೆಳಗಾವಿ, ಮಾ.6: ಪ್ರಾರ್ಥನಾ ಮಂದಿರದಲ್ಲಿ ನಿತ್ಯ ಮೈಕ್ ಹಾಗೂ ಹಸಿರು ಧ್ವಜ ಹಚ್ಚುವುದರ ಹಿಂದಿನ ಉದ್ದೇಶ ಏನು? ದೇಶ ಪ್ರೇಮವಿದ್ದರೆ ಪ್ರಾರ್ಥನಾ ಮಂದಿರದ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಹಾಗೇನಾದರು ಆದರೆ ಅಂಥವರ ದೇಶಪ್ರೇಮಕ್ಕೆ ನಾನೇ ಶರಣಾಗುವೆ ಎಂದು ಸಂಸದ ಸುರೇಶ್ ಅಂಗಡಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದುರ್ಗದಲ್ಲಿ ಬೆಳಕಿಗೆ ಬಂದ ಸಾಮಾಜಿಕ ಜಾಲತಾಣದಲ್ಲಿ ಪಾಕ್‌ಪರ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಅಧಿಕಾರಿಗಳು ಒಳಗಾಗಿದ್ದಾರೆ. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಅಂಥವರ ರಕ್ಷಣೆಗೆ ಸಮ್ಮಿಶ್ರ ಸರಕಾರ ನಿಂತಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಸ್ಟೇಟಸ್ ಹಾಕುವವರ ವಿರುದ್ಧ ಕ್ರಮವಾಗುತ್ತಿಲ್ಲ. ಪೊಲೀಸರ ಮೇಲೆ ಸಮ್ಮಿಶ್ರ ಸರಕಾರ ಒತ್ತಡ ಹಾಕುತ್ತಿದೆ. ಆ ಮೂಲಕ ದೇಶದ್ರೋಹಿಗಳನ್ನು ಕಾಂಗ್ರೆಸ್-ಜೆಡಿಎಸ್ ರಕ್ಷಣೆ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ಪಾಕಿಸ್ತಾನ ಪರ ಕೆಲಸ ಮಾಡಲು ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ. ಉಗ್ರರ ಸಾವಿನ ಲೆಕ್ಕ ಕೇಳುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಇಡೀ ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಸಂಸದ ಸುರೇಶ್ ಅಂಗಡಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News