ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಮತ್ತೆ ಮೂವರ ವಿಚಾರಣೆ
ಬೆಂಗಳೂರು, ಮಾ.6: ಹಿರಿಯ ಸಂಶೋಧಕ, ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ಮೂವರು ಆರೋಪಿಗಳನ್ನು ಮತ್ತೆ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಈ ಮೂವರೂ ಆರೋಪಿಗಳು ಶಾಮೀಲಾಗಿದ್ದರು ಎನ್ನಲಾಗಿದ್ದು, ಬಲಪಂಥೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಇಬ್ಬರು ಹಾಗೂ ಮಹಾರಾಷ್ಟ್ರದ ಮೆಕ್ಯಾನಿಕ್ ವೃತ್ತಿಯ ಯುವಕರು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಹೇಳಲಾಗುತ್ತಿದೆ.
ಪುಣೆಯಲ್ಲಿ ಮೆಕ್ಯಾನಿಕ್ ಆಗಿದ್ದ ಯುವಕನೊಬ್ಬ ಬಲಪಂಥೀಯರ ಸಂದೇಶಗಳಿಗೆ ಆಕರ್ಷಿತನಾಗಿದ್ದ. ಉತ್ತರ ಕರ್ನಾಟಕ ಭಾಗದ ಇಬ್ಬರು ಯುವಕರು ಸೇರಿ ವಿಚಾರವಾದಿ ಕಲಬುರ್ಗಿ ಅವರನ್ನು ಮುಗಿಸಲು ಹೊಂಚು ಹಾಕಿದ್ದಾರೆಂಬುದನ್ನು ತಿಳಿದು, ಅವರಿಗೆ ಬೈಕ್ ನೀಡಿದ್ದ ಎನ್ನುವ ಆರೋಪ ಕೇಳಿಬಂದಿದೆ.
2015 ಆಗಸ್ಟ್ 30ರಂದು ಧಾರವಾಡದ ಅವರ ನಿವಾಸದಲ್ಲಿ ಬೆಳಗ್ಗೆಯೇ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಡೆದು ಎರಡು ವರ್ಷಗಳ ನಂತರ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೂಡ ಇದೇ ಮಾದರಿಯಲ್ಲೇ ಕೊಲೆ ಮಾಡಲಾಗಿತ್ತು.