ಕೌಟುಂಬಿಕ ದ್ವೇಷ ಹಿನ್ನೆಲೆ: ನಿವೃತ್ತ ಪೊಲೀಸ್ ಅಧಿಕಾರಿಗೆ ಗುಂಡೇಟು
ಮಡಿಕೇರಿ, ಮಾ.6: ಕೌಟುಂಬಿಕ ದ್ವೇಷದಿಂದ ವ್ಯಕ್ತಿಯೋರ್ವ ನಿವೃತ್ತ ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಈರಳೆವಳಮುಡಿ ನಿವಾಸಿ, ಬಲ್ಲಾರಂಡ ರಮೇಶ್ ಉತ್ತಪ್ಪ(61) ಎಂಬವರೇ ಗುಂಡೇಟು ತಗುಲಿ ಗಾಯಗೊಂಡಿರುವ ವ್ಯಕ್ತಿ. ತೀವ್ರವಾಗಿ ಗಾಯಗೊಂಡಿರುವ ರಮೇಶ್ ಉತ್ತಪ್ಪ ಅವರಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ರಾತ್ರಿ 7.15ರ ಸಮಯದಲ್ಲಿ ಬಲ್ಲಾರಂಡ ಉತ್ತಪ್ಪ ತಮ್ಮ ಕಾಫಿ ತೋಟದಲ್ಲಿ ಮಗನೊಂದಿಗೆ ಸ್ಪ್ರಿಂಕ್ಲರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸ ಮುಗಿಸಿದ ಬಳಿಕ ಮನೆಗೆ ತೆರಳುವ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಆರೋಪಿ ಜಪ್ಪು ಕಾವೇರಪ್ಪ ಎಂಬಾತ ಮೊದಲು, ಸ್ಪ್ರಿಂಕ್ಲರ್ ಮೋಟಾರಿಗೆ ಹಾನಿಪಡಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ಕೈಯಲ್ಲಿದ್ದ ಕೋವಿಯಿಂದ ಏಕಾಏಕಿ ಉತ್ತಪ್ಪ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಕೋವಿಯಿಂದ ಸಿಡಿಯಲ್ಪಟ್ಟ ಗುಂಡು ಉತ್ತಪ್ಪ ಅವರ ಬಲಕಾಲಿಗೆ ತಗುಲಿದ್ದು, ಕುಸಿದು ಬಿದ್ದ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಜಪ್ಪು ಕಾವೇರಪ್ಪ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.