ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ: ಪ್ರಧಾನಿ ನರೇಂದ್ರ ಮೋದಿ

Update: 2019-03-06 15:02 GMT

ಕಲಬುರಗಿ, ಮಾ.6: ರೈತ ವಿರೋಧಿಗಳು ಕರ್ನಾಟಕದಲ್ಲಿದ್ದಾರೆ. ಕೊಟ್ಟ ಮಾತನ್ನು ಈಡೇರಿಸದ ಸರಕಾರ ಇನ್ನೇನು ಅಭಿವೃದ್ಧಿ ಮಾಡುತ್ತದೆ. ರಾಜ್ಯದಲ್ಲಿರುವ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ರೈತರಿಗೆ ಅನ್ಯಾಯ ಮಾಡಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯನ್ನು ಕಾಂಗ್ರೆಸ್ ಪಕ್ಷ ರಿಮೋಟ್ ಮೂಲಕ ನಿಯಂತ್ರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಬುಧವಾರ ನಗರದ ಎನ್.ವಿ.ಮೈದಾನದಲ್ಲಿ ರಾಜ್ಯ ಬಿಜೆಪಿ ಘಟಕ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀವು(ಮತದಾರರು)ಕೊಟ್ಟ ಬಹುಮತದಿಂದಲೇ ಕೇಂದ್ರದಲ್ಲಿ ನಮಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು. ಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬಂದರೆ ಮಾತ್ರ ಜನತೆಗೆ ನೀಡುವ ಎಲ್ಲ ಭರವಸೆಗಳನ್ನು ಈಡೇರಿಸಬಹುದು ಎಂದು ಹೇಳಿದರು.

ದೇಶದ ರಕ್ಷಣೆ, ಭಯೋತ್ಪಾದನೆಯ ನಿರ್ಮೂಲನೆಗೆ ನಿಮ್ಮ ಆಶೀರ್ವಾದ ಬೇಕು. ಮೋದಿ ಎಲ್ಲಿಯವರೆಗೆ ಅಧಿಕಾರದಲ್ಲಿರುತ್ತಾನೋ, ಅಲ್ಲಿಯವರೆಗೆ ಕಳ್ಳರ ಅಂಗಡಿಗಳು ಬಂದ್ ಆಗಿರುತ್ತವೆ ಎಂದರು. 30 ವರ್ಷಗಳ ಬಳಿಕ ಮೊದಲ ಬಾರಿಗೆ ಕೇಂದ್ರದಲ್ಲಿ ಸಂಪೂರ್ಣ ಬಹುಮತದ ಸರಕಾರ ಬಂದಿದೆ. ಭಾರತದ ಶಕ್ತಿ ಮೋದಿ ಶಕ್ತಿ ಅಲ್ಲ. ಇದು ಶತಕೋಟಿ ಭಾರತೀಯರ ಶಕ್ತಿ. ಇತ್ತೀಚೆಗಷ್ಟೇ ಹಿಂದೂಸ್ಥಾನವು ತನ್ನ ಶಕ್ತಿ ಏನು ಎಂಬುದನ್ನು ಪ್ರದರ್ಶನ ಮಾಡಿದೆ ಎನ್ನುವ ಮೂಲಕ, ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನೆಯು ಉಗ್ರರ ಅಡಗು ತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯ ಕುರಿತು ಅವರು ಪ್ರಸ್ತಾಪಿಸಿದರು.

ನಮ್ಮ ಸರಕಾರವು ಜನ ಸಾಮಾನ್ಯರಿಗಾಗಿ ಜನಧನ ಯೋಜನೆ ಜಾರಿ ಮಾಡಿದ್ದೇವೆ. ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಜೊತೆ ನಮ್ಮ ಸರಕಾರವಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದು ನರೇಂದ್ರಮೋದಿ ಹೇಳಿದರು.

ಕೇಂದ್ರ ಸರಕಾರವು ರೈತರಿಗೆ ಆರ್ಥಿಕ ನೆರವು ನೀಡಿದರೆ ನಿಮಗೇಕೆ ಹೊಟ್ಟೆಯುರಿ ಎಂದು ‘ಪ್ರಧಾನಮಂತ್ರಿ ಕೃಷಿ ಸಮ್ಮಾನ್’ ಯೋಜನೆಯನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ಸಣ್ಣ ಸಣ್ಣ ರೈತರ ಕಲ್ಯಾಣಕ್ಕಾಗಿ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಈ ಯೋಜನೆಗಾಗಿ 75 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದ್ದು, ಐದು ಎಕರೆಗಿಂತ ಕಡಿಮೆ ಜಮೀನು ಇರುವ ದೇಶದ ಸುಮಾರು 12 ಕೋಟಿ ರೈತರಿಗೆ ಈ ಯೋಜನೆಯ ಲಾಭ ಸಿಗುತ್ತದೆ. ಈಗಾಗಲೇ ಸಣ್ಣ ರೈತರ ಖಾತೆಗಳಿಗೆ 2 ಸಾವಿರ ರೂ.ಗಳನ್ನು ಜಮೆ ಮಾಡಲಾಗಿದೆ ಎಂದು ನರೇಂದ್ರಮೋದಿ ಹೇಳಿದರು.

ದೇಶದ ಮೂರು ಕೋಟಿ ಜನರಿಗೆ ತೆರಿಗೆ ವಿನಾಯಿತಿ ನೀಡಿದ್ದೇವೆ. 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಹೊಂದಿರುವ ಮಧ್ಯಮ ವರ್ಗದವರು ಆದಾಯ ತೆರಿಗೆ ಪಾವತಿಸುವಂತಿಲ್ಲ. ಅಭಿವೃದ್ಧಿಯಿಂದ ವಂಚಿತರಾಗಿದ್ದ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನಮ್ಮ ಸರಕಾರ ಒತ್ತು ನೀಡಿದೆ ಎಂದು ಅವರು ಹೇಳಿದರು.

ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿನಿಲಯ, ರಾಜಾಜಿನಗರದಲ್ಲಿ ಇಎಸ್‌ಐ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ. ಇಎಸ್‌ಐ ವೈದ್ಯಕೀಯ ಕಾಲೇಜುಗಳ ಪೈಕಿ ಒಂದು ಕಾಲೇಜನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೀದರ್-ಕಲಬುರಗಿ ನಡುವಿನ ರೈಲ್ವೆ ಯೋಜನೆಯನ್ನು ನಾವು ಪೂರ್ಣಗೊಳಿಸಿದ್ದೇವೆ. ಕರ್ನಾಟಕದ ಅಭಿವೃದ್ಧಿಯಿಂದ ಈ ನಿಮ್ಮ ಪ್ರಧಾನ ಸೇವಕ ಹಿಂದಕ್ಕೆ ಸರಿಯುವುದಿಲ್ಲ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೋದಿ ಹೇಳಿದರು.

ವಿಶ್ವದಲ್ಲೇ ಅತೀ ಹೆಚ್ಚು ಜನರಿಗೆ ಆರೋಗ್ಯ ಸೇವೆ ಒದಗಿಸುವ ‘ಆಯುಷ್ಮಾನ್ ಭಾರತ್’ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಅತ್ಯಾಧುನಿಕವಾದ ಸೂಪರ್ ಸ್ಪೆಷಾಲಿಟಿ ವ್ಯವಸ್ಥೆಗಳನ್ನು ಕಿಮ್ಸ್‌ಗೆ ನೀಡಲಾಗಿದೆ. ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ಸ್ಥಗಿತಗೊಂಡ ಯೋಜನೆಗಳಿಗೆ ನಾವು ಚಾಲನೆ ನೀಡಿದ್ದೇವೆ. ಕಲಬುರಗಿ ನಗರದ ಅಭಿವೃದ್ಧಿಗೆ ಕೇಂದ್ರ ಸರಕಾರ ಒಂದು ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಕರ್ನಾಟಕದಲ್ಲಿಯೂ ಉತ್ತಮ ಸಾಧನೆ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಡಾ.ಉಮೇಶ್ ಜಾಧವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News