ನರೇಂದ್ರ ಮೋದಿ ಅವರದ್ದು ಸಂತೆಯಲ್ಲಿ ಮಾತನಾಡುವ ಭಾಷೆ: ಸಿಎಂ ಕುಮಾರಸ್ವಾಮಿ ವ್ಯಂಗ್ಯ

Update: 2019-03-06 15:34 GMT

ಚಿಕ್ಕಮಗಳೂರು, ಮಾ.6: ರೈತರಿಗೆ ನಾನು ಏನೆಲ್ಲಾ ಮಾಡಿದ್ದೇನೆ, ಪ್ರಧಾನಿಯಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ ಎಂಬ ಬಗ್ಗೆ ಮೋದಿ ಅವರು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದರು.

ಇಂದು ಸಂಜೆ ಶೃಂಗೇರಿ ಪಟ್ಟಣಕ್ಕೆ ಕುಟುಂಬ ಸಮೇತ ಆಗಮಿಸಿ, ಶೃಂಗೇರಿ ಮಠಕ್ಕೆ ಭೇಟಿ ನೀಡಿ ಕೆಲ ಹೊತ್ತು ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ನಾನು ರಾಜ್ಯದ ಸಮಸ್ಯೆಗಳ ಬಗ್ಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕೆಂಬುದಕ್ಕೆ ಯೋಜನೆ ಹಾಕಿಕೊಂಡಿದ್ದೇನೆ. ಈ ಕಾರಣಕ್ಕೆ ನಮ್ಮ ಸ್ನೇಹಿತರು ನನ್ನನ್ನು ರಿಮೋಟ್ ಮಾಡಿಕೊಂಡಿದ್ದಾರೆ. ಪ್ರಧಾನಿ ಹೇಳಿರುವುದರಲ್ಲಿ ತಪ್ಪಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ರೈತರಿಗೆ ನಾನು ಏನೆಲ್ಲಾ ಮಾಡಿದ್ದೇನೆ, ಪ್ರಧಾನಿಯಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ ಎಂಬ ಬಗ್ಗೆ ಅವರು ಚರ್ಚೆಗೆ ಬರಲಿ ಎಂದರು

ಮಠಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷ ಏನಿಲ್ಲ. ತನ್ನ ಕುಟುಂಬದವರು ಮೊದಲಿನಿಂದಲೂ ಶಾರದಾಂಬೆ ಹಾಗೂ ಮಠದ ಭಕ್ತರಾಗಿದ್ದೇವೆ. ನಾವು ಏನೇ ಒಳ್ಳೆಯ ಕೆಲಸ ಮಾಡುವುದಕ್ಕೂ ಮುನ್ನ ದೇವಿಯ ಆಶೀರ್ವಾದ ಪಡೆಯುವುದು ವಾಡಿಕೆ. ಈ ಕಾರಣಕ್ಕೆ ದೇವಾಲಯಕ್ಕೆ ಭೇಟಿ ನೀಡಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ. ನಿಖಿಲ್ ರಾಜಕೀಯ ಪ್ರವೇಶಕ್ಕೂ, ಈ ಭೇಟಿಗೂ ಸಂಬಂಧ ಇಲ್ಲ ಎಂದರು.

ಪ್ರಧಾನಿ ಮೋದಿ ಅವರದ್ದು ಸಂತೆಯಲ್ಲಿ ಮಾತನಾಡುವ ಭಾಷೆ. ಅದಕ್ಕೆ ನಾನೇಕೆ ಪ್ರತಿಕ್ರಿಯೆ ಕೊಡಲಿ ಎಂದ ಅವರು, ರೈತರ ಪರವಾಗಿ ಕೆಲಸ ಮಾಡುವುದು, ಸಾಲ ಮನ್ನಾ ಮಾಡುವುದು ಮೋದಿ ಅವರ ಪ್ರಕಾರ ಪಾಪದ ಕೆಲಸವೇ ಎಂದು ಪ್ರಶ್ನಿಸಿದರು. ಮೋದಿ ಯಾರ ಪರ ಇದ್ದಾರೆಂಬುದನ್ನು ಮುಂದಿನ ದಿನಗಳಲ್ಲಿ ಜನತೆ ತೀರ್ಮಾನಿಸಲಿದ್ದಾರೆಂದರು. 

ಗೌಡ ಜನಾಂಗದವರನ್ನು ದೇವೇಗೌಡ ಕುಟುಂಬದವರು ಜಿಪಿಎ ಮಾಡಿಕೊಂಡಿದ್ದಾರಾ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಅವರು ಆ ರೀತಿಯಾಗಿ ಊಹೆ ಮಾಡಿಕೊಂಡರೆ ನಾನೇನು ಮಾಡಲಿ? ಅವರ ಮಾತು ಹುಡುಗಾಟಿಕೆ ಹಾಗೂ ಸಿಲ್ಲಿ ವಿಚಾರ. ನಾವು ಜನಗಳ ಕಷ್ಟ ಸುಖಗಳಿಗೆ ಭಾಗಿಯಾಗಿದ್ದೇವೆ. ಜನರ ಪ್ರೀತಿ ವಿಶ್ವಾಸದಿಂದ ನನ್ನ ಕುಟುಂಬ ಇಲ್ಲಿವರೆಗೆ ಬದುಕಿ ಬಂದಿದೆ, ರಾಜಕಾರಣದಲ್ಲಿ ಸಾಧನೆ ಮಾಡಿದೆ. ಅವರು ಅಸೂಯೆಯಿಂದ ಈ ರೀತಿ ಮಾತನಾಡಿದ್ದಾರೆ ಎಂದು ಹೆಳಿದರು. 

ಶೃಂಗೇರಿ ಮಠದ ಭೇಟಿ ವೇಳೆ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಗೌಡರ ಕುಟುಂಬದ ಸದಸ್ಯರು ಇದ್ದರು. ಪೂಜೆಯ ಬಳಿಕ ಮಠದ ಗುರುಗಳನ್ನು ಭೇಟಿಯಾದ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್‍ ಕುಮಾರಸ್ವಾಮಿ ಅವರು ಕೆಲ ಹೊತ್ತು ಗುರುಗಳೊಂದಿಗೆ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News