ಉಮೇಶ್ ಜಾಧವ್ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ಎಂ.ಬಿ.ಪಾಟೀಲ್

Update: 2019-03-06 17:10 GMT

ದಾವಣಗೆರೆ,ಮಾ.6: ಕಾಂಗ್ರೆಸ್ಸಿನ ಶಾಸಕ ಡಾ.ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವೂ ಇಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಜಾಧವ್ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್, ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಇವರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲವೆಂದರು. ಸರ್ಕಾರ ಪತನದ ಕುರಿತಂತೆ ಬಿಜೆಪಿ ನಾಯಕರು ನೀಡಿದ್ದ ಡೆಡ್‍ಲೈನ್ ಎಲ್ಲಾ ಮುಗಿದಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಸಿಎಂ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯೆಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಆದರೆ, ಕಾಂಗ್ರೆಸ್ ಜೆಡಿಎಸ್‍ಗೆ ಷರತ್ತು ರಹಿತ ಬೆಂಬಲ ನೀಡಿ, ಸಮ್ಮಿಶ್ರ ಸರ್ಕಾರ ರಚಿಸಿದ್ದನ್ನು ಮರೆಯಬಾರದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಕುಮಾರಸ್ವಾಮಿಗೆ ರಿಮೋಟ್‍ನಿಂದ ಕಂಟ್ರೋಲ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಂಡ್ಯ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಸಂಸದರೇ ಇದ್ದು, ಆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
ಹಿರಿಯರಾದ ಶಾಮನೂರು ಶಿವಶಂಕರಪ್ಪ ನನಗೆ ತಂದೆ ಸಮಾನ. ಹಿಂದೆ ಅವರ ಬಗ್ಗೆ ನಾನು ಮಾತನಾಡಿದ್ದು, ಅವರು ನನ್ನ ಬಗ್ಗೆ ಮಾತನಾಡಿದ್ದೆಲ್ಲಾ ಮುಗಿದ ಅಧ್ಯಾಯ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ನನಗೆ ಝೀರೋ ಟ್ರಾಫಿಕ್ ಬೇಡ  
ಝೀರೋ ಟ್ರಾಫಿಕ್ ಬೇಡ ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ಈ ಕಾರಣಕ್ಕೆ ನಾನು ಝಿರೋ ಟ್ರಾಫಿಕ್ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು. 

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಝೆಡ್ ಪ್ಲಸ್ ಭದ್ರತೆ ಹಾಗೂ ಝೀರೋ ಟ್ರಾಫಿಕ್ ಮಾಡಬೇಕಾಗುತ್ತದೆ. ಅದು ಶಿಷ್ಚಾಚಾರ. ಆದರೆ, ನನಗೆ ಝೀರೋ ಟ್ರಾಫಿಕ್ ಬೇಡವೆಂದು ಹೇಳುತ್ತೇನೆ ಎಂದು ಅವರು ತಿಳಿಸಿದರು.

ಗೃಹ ಸಚಿವರ ವಿರುದ್ಧ ಎಸ್‍ಎಸ್‍ಎಂ ಅಸಮಾಧಾನ !?

ವೀರಶೈವ ಲಿಂಗಾಯಿತ ವಿಚಾರವಾಗಿ ನಮ್ಮಪ್ಪನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತೀರಿ ನೀವು ಎಂದು ಗೃಹ ಸಚಿವ ಎಂ.ಬಿ ಪಾಟೀಲ್‍ ವಿರುದ್ಧ ಮಾಜಿ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಔತಣಕೂಟಕ್ಕೆ ಆಗಮಿಸಿದ್ದ ಸಂದರ್ಭ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೃಹಸಚಿವರನ್ನು ತರಾಟೆಗೆ ತೆಗೆದುಕೊಂಡರು. ನೀವು ವೀರಶೈವ ಲಿಂಗಾಯಿತ ವಿಚಾರವಾಗಿ ತಂದೆಯವರ ವಯಸ್ಸು,ಅನುಭವಕ್ಕೂ ಬೆಲೆ ಕೊಡದೇ ಬಾಯಿಗೆ ಬಂದಂತೆ ಮಾತನಾಡುತ್ತೀರಿ ಎಂದು ಕಿಡಿಕಾರಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News