ಬಿಜೆಪಿಗೆ ಹೆದರಿ ಸಿದ್ದರಾಮಯ್ಯ ಜೆಡಿಎಸ್ ಜೊತೆ ಕೈ ಜೋಡಿಸಿದ್ದಾರೆ: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್

Update: 2019-03-06 17:23 GMT

ಮೈಸೂರು,ಮಾ.6: ಬಿಜೆಪಿ ಪಕ್ಷಕ್ಕೆ ಹೆದರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಕಿಡಿಕಾರಿದರು.

ನಗರದ ಜೆ.ಕೆ.ಮೈದಾನದಲ್ಲಿ ಬಿಜೆಪ ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗೆ ಹೆದರಿ ಸಿದ್ದರಾಮಯ್ಯ ಜೆಡಿಎಸ್ ಜೊತೆ ಕೈ ಜೋಡಿಸಿದ್ದಾರೆ ಅಷ್ಟೇ. ಹೆಬ್ಬುಲಿ ಇದ್ದ ಹಳ್ಳಕ್ಕೆ ಕತ್ತೆ ಕಿರುಚಿಕೊಂಡು ಹೋಗಿ ಬಿದ್ದಂತಾಗಿದೆ ಕಾಂಗ್ರೆಸ್ ಪಾಡು ಎಂದು ವ್ಯಂಗ್ಯವಾಡಿದರು.

ಇವತ್ತು ಎಲ್ಲಿದೆ ಸರ್ಕಾರದಲ್ಲಿ ಸಮನ್ವಯ. ಸಿದ್ದರಾಮಯ್ಯ ಕಾಂಗ್ರೆಸ್ ಮುಕ್ತ ಆಗುತ್ತೆ ಅನ್ನೋ ಭಯದಿಂದ ಜೆಡಿಎಸ್ ಜೊತೆ ಹೋಗಿದ್ದಾರೆ ಅಷ್ಟೇ. ಎರಡು ಗೂಬೆಗಳ ಜಗಳದಿಂದ ಭತ್ತದ ಮೆದೆ ಹಾಳಾಯ್ತು ಅನ್ನೋ ಹಾಗಿದೆ ಸರ್ಕಾರದ ಸ್ಥಿತಿ. ಸರ್ಕಾರದಲ್ಲಿ ಜೆಡಿಎಸ್ ಕಂಡರೆ ಕಾಂಗ್ರೆಸ್ ಪಕ್ಷದವರಿಗೆ ಆಗಲ್ಲ, ಸುಮ್ಮನೆ ಮೈತ್ರಿ ಮಾಡಿಕೊಂಡಿದ್ದಾರೆ, ಒಳಗೊಳಗೇ ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಇಂದು ದುರ್ಬಲ ಆಗಿದೆ. ಸೋತು ಸುಣ್ಣವಾಗಿದ್ದ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರು ಪಾರ್ಲಿಮೆಂಟ್‍ಗೆ ಹೋಗೋಕೆ ನಿಖಿಲ್, ಪ್ರಜ್ವಲ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲು ಪುಟ್ಟರಾಜು, ಚೆಲುವರಾಯಸ್ವಾಮಿ ಕೈ ಹಿಡಿದುಕೊಂಡು ಹೋಗುತ್ತಿದ್ದರು. ಈ ವಯಸ್ಸಿನಲ್ಲಿ ಪಾರ್ಲಿಮೆಂಟ್‍ಗೆ ಹೋಗೋಕೆ ಮೊಮ್ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪಾರ್ಲಿಮೆಂಟಿನಲ್ಲಿ ಈವರೆಗೂ ಮಾತನಾಡಿಲ್ಲ. ಹೋಗಿ ಪಾರ್ಲಿಮೆಂಟ್ ನಲ್ಲಿ ಕುಳಿತುಕೊಂಡು ಬರೋಕಷ್ಟೇ ಹೋಗುತ್ತಾರೆ. ಈ ವಯಸ್ಸಿನಲ್ಲಿ ನಿಮಗೆ ಚುನಾವಣೆ ಬೇಕಿತ್ತಾ. ದೇವೇಗೌಡರೆ ನಿಮಗೆ ನಾಚಿಕೆ ಆಗಲ್ವೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಪ್ರಮುಖ ಅಶೋಕ್, ಶಾಸಕರಾದ ಎಸ್.ಎ.ರಾಮದಾಸ್, ನಿರಂಜನ್, ಎಲ್.ನಾಗೇಂದ್ರ, ಹರ್ಷವರ್ಧನ್, ಪ್ರೀತಂಗೌಡ, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಬ್ರಮಣಿ ಮಾಜಿ ಸಚಿವರಾದ ಬಿ.ಸೋಮಶೇಖರ್, ಕೋಟೆ ಶಿವಣ್ಣ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News