ಮಂಗನ ಕಾಯಿಲೆಯಿಂದ 10 ಮಂದಿ ಸಾವು ದೃಢ: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್

Update: 2019-03-06 17:50 GMT

ಶಿವಮೊಗ್ಗ, ಮಾ. 6: ಜಿಲ್ಲೆಯಲ್ಲಿ ಇದುವರೆಗೆ ಮಂಗನ ಕಾಯಿಲೆಗೆ 10 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ತಿಳಿಸಿದ್ದಾರೆ. 

ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಅರಳುಗೋಡು ವ್ಯಾಪ್ತಿಯಲ್ಲಿ ನಾಲ್ವರು ಮೃತಪಟ್ಟಿದ್ದು ಇವರ ಪೈಕಿ ಪೂರ್ಣಿಮಾ (35) ಎಂಬವರು ಮಂಗನ ಕಾಯಿಲೆಯಿಂದ ಮೃತಪಟ್ಟಿರುವುದು ಧೃಡಪಟ್ಟಿದೆ. ಇನ್ನುಳಿದಂತೆ ಪಾರ್ಶ್ವನಾಥ ಅವರ ಸಾವಿಗೆ ಮಂಗನ ಕಾಯಿಲೆ ಕಾರಣವಲ್ಲ. ಸೀತಮ್ಮ ಎಂಬವರ ಸಾವಿನ ಕಾರಣವನ್ನು ಇನ್ನಷ್ಟೇ ಧೃಡಪಡಿಸಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಪೂರ್ಣಿಮಾ ಅವರು ಎರಡು ಹಂತದ ಲಸಿಕೆಯನ್ನು ಪಡೆದಿದ್ದರು. ಮಂಗನ ಕಾಯಿಲೆಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಮಂಗನ ಕಾಯಿಲೆ ನಿಯಂತ್ರಣ ಕ್ರಮಗಳನ್ನು ಮುಂದುವರಿಸಲಾಗಿದ್ದು ಮಂಗಗಳ ಸಾವಿನ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ.

ಅರಳಗೋಡು ವ್ಯಾಪ್ತಿಯಲ್ಲಿ ಎಲ್ಲರಿಗೂ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1ಲಕ್ಷ ಎರಡು ಸಾವಿರ ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಕೆಎಫ್ ಡಿ ವೈರಸ್ ಹೊಂದಿರುವ ಉಣುಗುಗಳು ಲಸಿಕೆಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಹತ್ತು ಏಳು ಮಂದಿಗೆ ಮಂಗನ ಕಾಯಿಲೆ ಬಂದಿರುವುದು ದೃಢಪಟ್ಟಿದೆ ಎಂದರು. 

ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿ ಒಂದರಲ್ಲೇ 116 ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯಲ್ಲಿ ಸಾವಿರದ ಐನೂರಕ್ಕೂ ಹೆಚ್ಚು ಮಂದಿಯ ರಕ್ತ ಪರೀಕ್ಷೆಯನ್ನು ನಡೆಸಲಾಗಿದೆ. ಮುಂದಿನ ವರ್ಷಕ್ಕೆ ಅಗತ್ಯವಾದ ಲಸಿಕೆ ಹಾಗೂ ಡಿಎಂಪಿ ಖರೀದಿಸುವ ಕುರಿತು ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಸಭೆ: ಡಿ.ಸಿ. ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದರು. ಮಂಗನ ಕಾಯಿಲೆ ಜಿಲ್ಲೆಯ ಹಲವೆಡೆಗಳಲ್ಲಿ ಕಂಡುಬಂದಿದ್ದರೂ, ಅರಳಗೋಡು ವ್ಯಾಪ್ತಿಯಲ್ಲಿ ಮಾತ್ರ ಸಾವಿನ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಅಧ್ಯಯನ ನಡೆಸಬೇಕು. ಅರಳಗೋಡು ವ್ಯಾಪ್ತಿಯಲ್ಲಿ ಮಣ್ಣಿನ ಪರೀಕ್ಷೆ, ಕುಡಿಯುವ ನೀರಿನ ಮೂಲಗಳ ಪರೀಕ್ಷೆ, ಬೋರ್ವೆಲ್ ನೀರಿನ ಪರೀಕ್ಷೆಯನ್ನು ನಡೆಸಬೇಕು ಎಂದು ಸೂಚಿಸಿದ್ದಾರೆ. 

ಅರಳಗೋಡು ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವಿನ ಅಗತ್ಯವಿದೆಯೇ, ಜಮೀನಿನಲ್ಲಿ ಮೇವಿನ ಅಲಭ್ಯತೆ ಇದೆಯೇ ಇತ್ಯಾದಿಗಳ ಕುರಿತು ಪರಿಶೀಲಿಸಿ ವರದಿಯನ್ನು ಒಪ್ಪಿಸಬೇಕು. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಈ ಕುರಿತು ತಂಡಗಳನ್ನು ರಚಿಸಿ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಅಗತ್ಯವಿದ್ದರೆ ಜಿಲ್ಲಾಡಳಿತದ ವತಿಯಿಂದ ಮೇವು ಪೂರೈಕೆ ಮಾಡಲಾಗುವುದು.

ಮಂಗನ ಕಾಯಿಲೆ ಹರಡುವ ಉಣುಗುಗಳನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಸಲಹೆಗಳನ್ನು ನೀಡಬೇಕು.  ಅರಳುಗೋಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಿನ ಅಂಚಿನಲ್ಲಿ ಫಯರ್ ಲೈನ್ ಮಾಡಿ ಉಣುಗಿನ ಸಂಚಾರವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು. 

ಅರಳಗೋಡು ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇನ್ನೊಂದು ಸುತ್ತಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸಿದ್ಧಪಡಿಸಬೇಕು. ಕಾರ್ಗಲ್ ಬಳಿ ಎಂಪಿಎಂ ಕಾರ್ಖಾನೆ ಕಾರ್ಖಾನೆಗಾಗಿ ಸುಮಾರು 70 ರಷ್ಟು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ಈ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News