ಕಲ್ಲು ಸಾಗಿಸುತ್ತಿದ್ದ ವಾಹನ ಪಲ್ಟಿ: ಕೂಲಿ ಕಾರ್ಮಿಕ ಮೃತ್ಯು- ಮೂವರಿಗೆ ಗಾಯ

Update: 2019-03-06 18:28 GMT

ಕಳಸ, ಮಾ.6: ಪಟ್ಟಣ ಸಮೀಪದ ಬರಗೋಡು ಎಂಬಲ್ಲಿ ಮನೆ ನಿರ್ಮಾಣಕ್ಕೆ ಕಲ್ಲುಗಳನ್ನು ಪಿಕಪ್ ವಾಹನವೊಂದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟು ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ವರದಿಯಾಗಿದೆ.

ಪಟ್ಟಣ ಸಮೀಪದ ಹಂದಿಹಡ್ಲು ಗ್ರಾಮದ ನಿವಾಸಿ ಹಾಗೂ ಕೂಲಿ ಕಾರ್ಮಿಕ ಬಾಬು(50) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ಇವರು ಹಂದಿಹಡ್ಲು ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದು, ಬುಧವಾರ ಬೆಳಗ್ಗೆ ಕಳಸ ಪಟ್ಟಣಕ್ಕೆ ತನ್ನ ಇಬ್ಬರು ಪರಿಚಯಸ್ಥರೊಂದಿಗೆ ಆಗಮಿಸಿದ್ದ ಅವರು, ಮನೆ ಕಾಮಗಾರಿಗೆ ಸೈಜುಗಲ್ಲುಗಳನ್ನು ಪಿಕಪ್ ವಾಹನವೊಂದಕ್ಕೆ ಲೋಡ್ ಮಾಡಿಕೊಂಡು ಕಳಸ ಸಮೀಪದ ತೋಡ್ಲು ಗ್ರಾಮದ ಬರಗೋಡು ಮಾರ್ಗವಾಗಿ ಹಂದಿಹಡ್ಲು ಗ್ರಾಮಕ್ಕೆ ಪಿಕಪ್ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ತನ್ನ ಜತೆಗಿದ್ದ ಇಬ್ಬರ ಪೈಕಿ ಹರೀಶ್ ಎಂಬವರನ್ನು ಪಿಕಪ್ ವಾಹನದ ಮುಂಭಾಗದಲ್ಲಿ ಕೂರಿಸಿ ಬಾಬು, ದೇಜು ಹಿಂಬದಿಯಲ್ಲಿ ಕಲ್ಲುಗಳ ಮೇಲೆ ಕೂತಿದ್ದರೆಂದು ತಿಳಿದು ಬಂದಿದೆ.

ಪಿಕಪ್ ವಾಹನ ಬರಗೋಡು ಗ್ರಾಮದ ಏರು ಕಚ್ಚಾ ರಸ್ತೆಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನ ಏಕಾಏಕಿ ಹಿಂದಕ್ಕೆ ಚಲಿಸಲಾರಂಭಿಸಿದೆ. ಕೂಡಲೇ ವಾಹನದಿಂದ ಇಳಿದ ದೇಜಪ್ಪ ವಾಹನದ ಚಕ್ರಕ್ಕೆ ಕಲ್ಲು ಕೊಟ್ಟಿದ್ದಾರೆ. ಆದರೂ ನಿಲ್ಲದೇ ಜಾರುತ್ತಿದ್ದ ವಾಹನ ಸುಮಾರು 50 ಅಡಿ ದೂರಕ್ಕೆ ಜಾರುತ್ತಲೇ ಬಂದು ಉದ್ದಿನ ಮಕ್ಕಿ ರಸ್ತೆಗೆ ಬಿದ್ದಿದೆ. ಬಿದ್ದ ರಭಸಕ್ಕೆ ಮೇಲೆ ಕೂತಿದ್ದ ಬಾಬು ಕೆಳಗೆ ಬಿದ್ದಿದ್ದು, ಅವರ ಮೇಲೆಯೇ ಕಲ್ಲು ಉರುಳಿ ಬಿದ್ದಿವೆ. ಈ ವೇಳೆ ಅವರ ತಲೆಗೆ ತೀವ್ರವಾಗಿ ಕಲ್ಲೇಟು ಬಿದ್ದಿದೆ ಎಂದು ತಿಳಿದು ಬಂದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕಳಸ ಸರಕಾರ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಪಿಕಪ್ ಚಾಲಕ ಮಣಿ, ಕಾರ್ಮಿಕರಾದ ಹರೀಶ್ ಹಾಗೂ ದೇಜಪ್ಪ ಅವರಿಗೆ  ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಡ್ಲು ಗ್ರಾಮಕ್ಕೆ ಸುಸಜ್ಜಿತ ರಸ್ತೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News