ಮತ್ತೆ ಸದ್ದು ಮಾಡಿದರೆ, ಏಟು ಬಿಗಿದು ಹೊರಗಟ್ಟಿ: ಪ್ರತಿಭಟನಕಾರರ ವಿರುದ್ಧ ಗಡ್ಕರಿ ಆಕ್ರೋಶ

Update: 2019-03-07 11:40 GMT

ನಾಗ್ಪುರ, ಮಾ.7: ನಗರದಲ್ಲಿ ಬುಧವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಮಾತನಾಡುತ್ತಿರುವ ವೇಳೆ ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಆಗ್ರಹಿಸಿ ಕೆಲವರು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಂಡು ತಾಳ್ಮೆ ಕಳೆದುಕೊಂಡ ಸಚಿವರು ಅವರನ್ನು ಹೊರಗಟ್ಟಲಾಗುವುದು ಎಂದು ಎಚ್ಚರಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಹಲವು ಹಿರಿಯ ಬಿಜೆಪಿ ನಾಯಕರು ಕೂಡ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗಡ್ಕರಿ ಭಾಷಣ ಮಾಡುತ್ತಿದ್ದ ವೇಳೆ ಸಭಿಕರಲ್ಲಿದ್ದ ವಿದರ್ಭ ಪರ ಹೋರಾಟಗಾರರು ಘೋಷಣೆ ಕೂಗಲಾರಂಭಿಸಿದರಲ್ಲದೆ ಮಾಧ್ಯಮ ಮಂದಿ ಕುಳಿತೆಡೆಗೆ ಕರ ಪತ್ರಗಳನ್ನೂ ಎಸೆದಿದ್ದರು.

ಇದರಿಂದ ಅಸಮಾಧಾನಗೊಂಡ ಗಡ್ಕರಿ ಮೊದಲು ಅವರೆಲ್ಲರಿಗೂ ಸುಮ್ಮನಾಗುವಂತೆ ಹೇಳಿದ್ದರು. ನಂತರ ಮಾತನಾಡಿದ ಅವರು ‘‘ಮತ್ತೆ ಸದ್ದು ಮಾಡಿದರೆ, ಏಟು ಬಿಗಿದು ಎಲ್ಲರನ್ನೂ ಹೊರಗಟ್ಟಿ ಬಿಡಿ’’ ಎಂದು ಸಿಟ್ಟಿನಿಂದ ಸೂಚಿಸಿದರು.

ನಾಗ್ಪುರ್ ನಗರವನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕು. ನಾಗ್ಪುರ್ ಮತ್ತು ವಿದರ್ಭ ಪ್ರಾಂತ್ಯವನ್ನು ಜಗತ್ತಿನ ನಕ್ಷೆಯಲ್ಲಿ ಎದ್ದು ಕಾಣುವಂತೆ ಮಾಡಬೇಕು’’ ಎಂದು ಗಡ್ಕರಿ ಹೇಳಿದರು.

ಗಡ್ಕರಿ ಮತ್ತು ಫಡ್ನವಿಸ್ ಇಬ್ಬರೂ ನಾಗ್ಪುರಕ್ಕೆ ಸೇರಿದವರಾಗಿದ್ದಾರೆ.

ವಿದರ್ಭವನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಕೂಗು ಕಳೆದೆರಡು ದಶಕಗಳಿಂದ ಇದೆ. ಬಿಜೆಪಿ ಇದರ ಪರ ಇದ್ದರೂ ಅದರ ಮಿತ್ರ ಪಕ್ಷ ಶಿವಸೇನೆ ಪ್ರತ್ಯೇಕ ರಾಜ್ಯ ರಚನೆಯನ್ನು ಬಲವಾಗಿ ವಿರೋಧಿಸುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News