ಮಾ.9 ರಂದು ಕೊಡಗು ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನ

Update: 2019-03-07 12:04 GMT

ಮಡಿಕೇರಿ, ಮಾ.7: ಕನ್ನಡ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನ ಮಾ.9ರಂದು ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು, ಈಗಾಗಲೇ ಜಿಲ್ಲೆಯಲ್ಲಿ ಮಹಿಳಾ, ಮಕ್ಕಳ ಹಾಗೂ ರೈತರ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿದ್ದು, ಈ ಎಲ್ಲಾ ಸಮ್ಮೇಳನಗಳು ರಾಜ್ಯದಲ್ಲೇ ಪ್ರಥಮ ಎನಿಸಿಕೊಂಡಿದೆ ಎಂದರು. ಇಂದಿನ ಮೊಬೈಲ್ ಯುಗದಲ್ಲಿ ಯುವಜನರು ಸಾಹಿತ್ಯದಿಂದ ದೂರ ಸರಿಯಬಾರದು ಎಂಬ ಉದ್ದೇಶದಿಂದ ಇದೀಗ ಯುವಜನರಿಗಾಗಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕುಶಾಲನರದ ಸರಕಾರಿ ಪಾಲಿಟೆಕ್ನಿಕ್‍ನ ಸಹಯೋಗದಲ್ಲಿ ಯುವ ಸಾಹಿತ್ಯ ಸೌರಭಕ್ಕೆ ಅಂದು ಪೂರ್ವಾಹ್ನ 8.30 ಗಂಟೆಗೆ ಕುಶಾಲನಗರ ಡಿವೈಎಸ್‍ಪಿ ಮುರಳೀಧರ್, ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಫ್ ಹಾಗೂ ತಾನು ಕ್ರಮವಾಗಿ ರಾಷ್ಟ್ರಧ್ವಜ, ನಾಡ ಧ್ವಜ ಹಾಗೂ ಪರಿಷತ್ತು ಧ್ವಜವನ್ನು ಆರೋಹಣ ಮಾಡುವುದರೊಂದಿಗೆ ಚಾಲನೆ ನೀಡಲಿದ್ದು, 9 ಗಂಟೆಗೆ ಕಾರ್ಯಪ್ಪ ವೃತ್ತದಿಂದ ಪಾಲಿಟೆಕ್ನಿಕ್‍ವರೆಗೆ ನಡೆಯಲಿರುವ ವಿದ್ಯಾರ್ಥಿಗಳ ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆಗೆ ಉದ್ಯಮಿ ನಾಗೇಂದ್ರ ಪ್ರಸಾದ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮೆರವಣಿಗೆಯ ಬಳಿಕ ಸರ್ ಎಂ.ವಿಶ್ವೇಶ್ವರಯ್ಯ ದ್ವಾರವನ್ನು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಹಾಗೂ ಕಾವೇರಿ ಸಭಾಂಗಣವನ್ನು ಸರಕಾರಿ ಪಾಲಿಟೆಕ್ನಿಕ್‍ನ ನಿವೃತ್ತ ಪ್ರಾಂಶುಪಾಲ ಹೆಚ್.ಎಸ್. ಶಿವಪ್ಪ ಅವರುಗಳು ಉದ್ಘಾಟಿಸಲಿದ್ದು, 10:30 ಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮವನ್ನು ವಿಧನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಉದ್ಘಾಟಿಸಲಿದ್ದಾರೆ. ಅರಿಶಿನಕುಪ್ಪೆಯ ರಾಜೇಶ್‍ನಾಥ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದುಂಡಿರಾಜ್ ಅವರು ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಮುಖ್ಯ ಭಾಷಣದಲ್ಲಿ ಸಂದೇಶ ನೀಡಲಿದ್ದಾರೆ. ಸಂಸದ ಪ್ರತಾಪ್‍ಸಿಂಹ ಅವರು ಪ್ರೊ. ಬೆಸೂರು ಮೋಹನ್ ಪಾಳೇಗಾರ್ ಅವರ ‘ಭಾವ ದೀಪ್ತಿ’  ಕಾದಂಬರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕರಾದ ಕೆ.ಜಿ.ಬೋಪಯ್ಯ, ಭೋಜೇಗೌಡ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಲೋಕೇಶ್ ಸಾಗರ್ ಮಾಹಿತಿ ನೀಡಿದರು.

ಪತ್ರಕರ್ತ ಎಸ್.ಎ.ಮುರಳೀಧರ್ ಅವರು ತಮ್ಮ ತಾಯಿ ಪಾರ್ವತಮ್ಮ ಅವರ ಹೆಸರಿನಲ್ಲಿ ಕಾಲೇಜಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಯಡಿ ಅಂತರಕಾಲೇಜು ಭಾವಗೀತೆ ಸ್ಪರ್ಧೆಯನ್ನು ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದು, ಮಧ್ಯಾಹ್ನ 12ಗಂಟೆಯಿಂದ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆಂಪೇಗೌಡ ಅವರು ವಹಿಸಲಿದ್ದಾರೆ. ದತ್ತಿನಿಧಿ ಸ್ಥಾಪಕ ಹಾಗೂ ಪರಿಷತ್‍ನ ಜಿಲ್ಲಾ ಕೋಶಾಧಿಕಾರಿ ಎಸ್.ಎ.ಮುರಳೀಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್, ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಅಪರಾಹ್ನ 1:30ಕ್ಕೆ ಭಾವಸಂಗಮ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10:30ರಿಂದ ಸಮಾನಾಂತರ ವೇದಿಕೆಯಲ್ಲಿ ಸಾಹಿತಿ ಸತೀಶ್ ಕಾಜೂರು ಅವರ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ, ಪಿಯುಸಿ ನಂತರದ ಯುವ ಕವಿಗಳಿಂದ ಕವನ ವಾಚನ ನಡೆಯಲಿದೆ. ಮಧ್ಯಾಹ್ನ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಡಾ. ಕೆ.ಸಿ.ದಯಾನಂದ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ‘ದೇಶ ರಕ್ಷಣೆಯಲ್ಲಿ ಯುವ ಜನತೆ ಪಾತ್ರ’ ಎಂಬ ವಿಷಯದ ಕುರಿತು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಪತ್ರಕರ್ತ ವಿಘ್ನೇಶ್ ಭೂತನಕಾಡು ಅವರು ‘ಸಾಹಿತ್ಯ ಅಭಿವೃದ್ಧಿಗೆ ಮಾಧ್ಯಮಗಳ ಪಾತ್ರ’ ಮತ್ತು ತೃತೀಯ ಬಿ.ಎ ವಿದ್ಯಾರ್ಥಿನಿ ವಿ.ಆರ್. ಮಧುರಾ ಅವರು ‘ಸ್ವಯಂ ಉದ್ಯೋಗ ಮತ್ತು ಯುವಜನತೆ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.

ಸಮಾರೋಪ-ಸನ್ಮಾನ
ಅಪರಾಹ್ನ 3 ಗಂಟೆಗೆ ನಡೆಯುವ ಸಮಾರೋಪದ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ರವಿ ಚನ್ನಣ್ಣನವರ್ ಅವರು ಸಮಾರೋಪ ಭಾಷಣ ಮಾಡಲಿದ್ದು, ವೀರಾಜಪೇಟೆಯ ರಂಜಿತಾ ಕಾರ್ಯಪ್ಪ, ಕೊಡ್ಲಿಪೇಟೆಯ ಶಿಕ್ಷಕ ಸತೀಶ್‍ ತಾವೂರಿನ ಕಿಶೋರ್ ಕುಮಾರ್, ಚೆಂಬುವಿನ ಸಂಗೀತ ರವಿರಾಜ್, ಕುಶಾಲನಗರದ ಮಂಜು ಭಾರ್ಗವಿ, ಗಾಯಕ ಸತೀಶ್, ಸಂಗೀತ ಸಂಯೋಜನಕ ದರ್ಶನ್ ಸಾಗರ್, ಪತ್ರಕರ್ತ ವಿಜಯ ಹಾನಗಲ್, ವೀರಾಜಪೇಟೆಯ ಶಶಾಂಕ್, ಶನಿವಾರಸಂತೆಯ ದಿನೇಶ್ ಮಾಲಂಬಿ ಅವರುಗಳನ್ನು ಸನ್ಮಾನಿಸಲಾಗುವುದಲ್ಲದೆ, ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ದೀರ್ಘಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದ ಹೆಚ್.ವಿ.ಶಿವಪ್ಪ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಲೋಕೇಶ್ ಸಾಗರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ಸಮಿತಿ ಕೋಶಾಧಿಕಾರಿ ಎಸ್.ಎ.ಮುರಳೀಧರ್, ನಿರ್ದೇಶಕರಾದ ಕವನ್ ಕಾರ್ಯಪ್ಪ, ಕೋಡಿ ಚಂದ್ರಶೇಖರ್ ಹಾಗೂ ಕೆ.ಕೆ.ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News