×
Ad

ಹಲ್ಲೆಗೊಳಗಾದ ಮಾಜಿ ಸೈನಿಕನಿಗೆ ಉದ್ಯೋಗ-ಚಿಕಿತ್ಸೆ: ಸಚಿವ ಝಮೀರ್ ಅಹ್ಮದ್

Update: 2019-03-07 18:40 IST

ಹಾವೇರಿ, ಮಾ.7: ಬಸ್ಸಿನಲ್ಲಿ ಸೀಟು ಬಿಡುವ ಕ್ಷುಲ್ಲಕ ವಿಚಾರಕ್ಕೆ ಇತ್ತೀಚೆಗೆ ಹಲ್ಲೆಗೊಳಗಾಗಿ ಗಾಯಗೊಂಡ ಮಾಜಿ ಸೈನಿಕನ ಮನೆಗೆ ಜಿಲ್ಲಾ ಉಸ್ತುವಾರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್‌ ಖಾನ್ ಭೇಟಿ ನೀಡಿ, ಸಾಂತ್ವನ ಹೇಳಿದ್ದಲ್ಲದೆ, ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಕಳೆದ ಫೆಬ್ರವರಿಯಲ್ಲಿ ಕುಟುಂಬ ಸಮೇತರಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸೀಟಿನ ವಿಚಾರಕ್ಕೆ ದುಷ್ಕರ್ಮಿಗಳು ಹಾವೇರಿ ನಗರದಲ್ಲಿ ಮಾಜಿ ಯೋಧ ಕುಮ್ಮೂರ ಗ್ರಾಮದ ಪರಮೇಶ್ವರ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಗಾಯಾಳು ಪರಮೇಶ್ವರ್ ಆರೋಗ್ಯ ವಿಚಾರಿಸಿದ ಝಮೀರ್ ಅಹ್ಮದ್, ಕೌಟುಂಬಿಕ ವಿವರ ಪಡೆದರು. ಏಟಿನಿಂದ ಹಲ್ಲಿಗೆ ತೀವ್ರ ಪೆಟ್ಟಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆಗಾಗಿ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬನ್ನಿ ನಿಮಗೆ ಪ್ರತಿಷ್ಠಿತ ವಿಕ್ರಂ ಆಸ್ಪತ್ರೆಯಲ್ಲಿ ಹಲ್ಲಿನ ನೋವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವುದಾಗಿ ಹೇಳಿದರು.

ಉದ್ಯೋಗ ಭರವಸೆ: ತಂದೆಯ ಅನಾರೋಗ್ಯ ಕಾರಣ ಸ್ವಯಂ ನಿವೃತ್ತಿ ಪಡೆದು ಊರಿಗೆ ಬಂದಿರುವೆ. ನನಗೆ ಕೌಟುಂಬಿಕ ನಿರ್ವಹಣೆಗೆ ಉದ್ಯೋಗದ ಅವಶ್ಯಕತೆ ಇದ್ದು, ಈಗಾಗಲೇ ಪೊಲೀಸ್ ಇಲಾಖೆ, ಮೆಟ್ರೋ ಹಾಗೂ ಕಂದಾಯ ಇಲಾಖೆಯಲ್ಲಿ ನೌಕರರಿಗಾಗಿ ಅರ್ಜಿ ಸಲ್ಲಿಸಿರುವೆ ಎಂದು ಪರಮೇಶ್ವರ್ ತಿಳಿಸಿದರು.

ಉದ್ಯೋಗ ಅವಕಾಶ ಒದಗಿಸಿಕೊಡುವಂತೆ ಪರಮೇಶ್ವರ್ ಮಾಡಿದ ಮನವಿಗೆ ಸ್ಪಂದಿಸಿದ ಅವರು, ಯೋಧನ ಶೈಕ್ಷಣಿಕ ದಾಖಲೆಗಳನ್ನು ಪಡೆದು ಉದ್ಯೋಗ ಒದಗಿಸುವ ಭರವಸೆಯನ್ನು ನೀಡಿದರು. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಅವಕಾಶ ಕುರಿತಂತೆ ಸ್ಥಳದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.

ಕೋಮು ಬಣ್ಣ ಬೇಡ: ದೇಶಸೇವೆ ಮಾಡುವ ಸೇನೆ ಹಾಗೂ ನಮ್ಮನ್ನು ರಕ್ಷಿಸುವ ಪೊಲೀಸರಿಗೆ ನಾವು ಗೌರವ ಕೊಡಬೇಕು. ಗಡಿ ಕಾಯುವ ಸೈನಿಕರಿಂದ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಕ್ಷುಲ್ಲಕ ಕಾರಣಕ್ಕಾಗಿ ಅವರ ಮೇಲೆ ಹಲ್ಲೆಮಾಡಿರುವುದು ಖಂಡನೀಯ ಈಗಾಗಲೇ ತಪ್ಪಿತಸ್ಥತರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ ಎಂದು ಅವರು ಹೇಳಿದರು.

ಮಾಜಿ ಸೈನಿಕ ಮೇಲಿನ ಹಲ್ಲೆ ಪ್ರಕರಣವನ್ನು ರಾಜಕೀಯ ಹಾಗೂ ಕೋಮು ಬಣ್ಣ ಹಚ್ಚುವುದು ಬೇಡ. ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಕೋಮು ಸೌಹಾರ್ದತೆಯಿಂದ ಎಲ್ಲರೂ ಬಾಳುತ್ತಿದ್ದೇವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ ಝಮೀರ್ ಅಹ್ಮದ್, ಮಾಜಿ ಯೋಧನ ನಿರಾಕರಣೆಯ ನಡುವೆಯೂ ಒಂದು ಲಕ್ಷ ರೂ.ವೈಯಕ್ತಿಕ ಸಹಾಯ ಧನವನ್ನು ನೀಡಿದರು.

ಯೋಧನ ಅಳಲು: ನನಗೆ ಎರಡು ಚಿಕ್ಕ ಮಕ್ಕಳಿದ್ದಾರೆ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಂದೆಯ ಆರೋಗ್ಯದ ದೃಷ್ಟಿಯಿಂದ 17 ವರ್ಷದ ಸೇನೆಯ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಸ್ಥಳೀಯವಾಗಿ ಉದ್ಯೋಗ ಸೇರುವ ಇಚ್ಛೆ ಹೊಂದಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ಸೈನ್ಯದಲ್ಲಿ ಯಾವುದೇ ಜಾತಿ, ಕೋಮು ಭಾವನೆ ಇಲ್ಲದೆ ಎಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಸಲ್ಲಿಸುತ್ತಿರುವವರಿಗೆ ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು. ನಮ್ಮನ್ನು ರಕ್ಷಿಸುವ ಪೊಲೀಸರಿಗೂ ಗೌರವ ಕೊಡಬೇಕು ಎಂದು ಮನವಿ ಮಾಡಿದ ಅವರು, ಈಗಾಗಲೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವೆ. ಆದರೆ, ಹಲ್ಲುಗಳು ಸಡಿಲಗೊಂಡಿದ್ದು ತೀವ್ರ ನೋವನ್ನು ಅನುಭವಿಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಮ್ ಅಹ್ಮದ್, ಮಾಜಿ ಶಾಸಕ ಬಸವರಾಜ ಶಿವಣ್ಣನವರ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News