ಮೋದಿಯಂತಹ ನೂರು ಮಂದಿ ಬಂದರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2019-03-07 15:22 GMT

ಕಲಬುರಗಿ, ಮಾ.7: ಕಲಬುರಗಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯಷ್ಟೇ ಮಾತನಾಡಲು ಸಾಧ್ಯ. ಹೀಗಾಗಿ ನನ್ನ ಕುರಿತು ಪ್ರಧಾನಿ ನರೇಂದ್ರ ಮೋದಿ ಏನೂ ಮಾತನಾಡದೆ ಹಿಂದಿರುಗಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಸುಳ್ಳು ಮಾತನಾಡಿದರೆ ಇಲ್ಲಿನ ಜನರು ತಿರುಗೇಟು ನೀಡುತ್ತಾರೆಂಬುದು ಮೋದಿಗೆ ಗೊತ್ತಿದೆ. ಖರ್ಗೆ ಎಂದ ಕೂಡಲೇ ಅಭಿವೃದ್ದಿ ಜನರ ಕಣ್ಣ ಮುಂದೆ ಬರುತ್ತದೆ. ಹೀಗಾಗಿ ಅವರು ನನ್ನ ಬಗ್ಗೆ ಏನೂ ಮಾತನಾಡಿಲ್ಲ. ಇದು ಚುನಾವಣಾ ತಂತ್ರಗಾರಿಕೆ ಭಾಗವೇ ಆಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಕಲಬುರಗಿಗೆ ಬರುತ್ತಿದ್ದು, ಕಲ್ಲಿನ ನಾಡನ್ನು ಚಿನ್ನದ ನಾಡನ್ನಾಗಿ ಮಾಡಿಬಿಡುತ್ತಾರೆಂಬ ಭಾವಿಸಿದ್ದೆ. ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬ ಮಾತಿನಂತೆ ಹೀಗೆ ಬಂದು ಹಾಗೇ ಹೋಗಿದ್ದಾರೆ. ಈ ಕರ್ಮಕ್ಕೆ ಅವರು ದಿಲ್ಲಿಯಿಂದ ಇಲ್ಲಿಗೆ ಬರಬೇಕಿತ್ತೇ ಎಂದು ಪ್ರಶ್ನಿಸಿದ ಅವರು, 5 ವರ್ಷಗಳಲ್ಲಿ ಮೋದಿ ಈ ಜಿಲ್ಲೆಗೆ ಮಾಡಿದ ಒಂದೇ ಒಂದೂ ಕೆಲಸವನ್ನಾದರೂ ಬಾಯಿ ಬಿಟ್ಟು ಹೇಳಬೇಕಿತ್ತು. ಆದರೆ, ಅವರು ಏಕೆ ಹೇಳಲಿಲ್ಲ ಎಂದು ಟೀಕಿಸಿದರು.

ರೈಲ್ವೆ ವಿಭಾಗೀಯ ಕಚೇರಿ, ಹೊರ ವರ್ತುಲ ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಿವೆ. ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಹಲವು ಕಡತಗಳು ದೂಳು ಹಿಡಿದಿವೆ. ಅದೆಲ್ಲವನ್ನೂ ಬೆಂಗಳೂರು, ರಾಯಚೂರು ಹಾಗೂ ಹುಬ್ಬಳ್ಳಿಗೆ ಮಂಜೂರಾದ ಕಾಮಗಾರಿಗಳಿಗೆ ಕಲಬುರಗಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಟೀಕಿಸಿದರು.

ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ

‘ನನಗೆ ವಯಸ್ಸಾಗಿದೆ. ಇದೇ ಕೊನೆಯ ಚುನಾವಣೆ ಎಂದು ಬಹಳ ಜನ ಮಾತನಾಡುತ್ತಿದ್ದಾರೆ. ಆದರೆ, ನಾನು ಹುಟ್ಟು ಹೋರಾಟಗಾರ. ನನಗಿದು ಕೊನೆಯ ಚುನಾವಣೆಯಲ್ಲ. ನನ್ನನ್ನು ಸೋಲಿಸಲು ಮೋದಿ ಅವರಂತಹ ಬಹಳ ಜನ ಕುತಂತ್ರ ನಡೆಸಿದ್ದಾರೆ. ಆದರೆ, ನನ್ನನ್ನು ಸೋಲಿಸುವುದು ಅಥವಾ ಗೆಲ್ಲಿಸುವುದು ಈ ಕ್ಷೇತ್ರದ ಜನರ ಕೈಲಿದೆ ಹೊರತು, ಮೋದಿ ಕೈಯಲ್ಲಿಲ್ಲ. ಇಂತಹ ನೂರು ಮಂದಿ ಬಂದರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ’

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

‘ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಲಬುರಗಿಯಲ್ಲಿ (ಉಮೇಶ್ ಜಾಧವ್, ಮಾಲಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್) ತ್ರಿಮೂರ್ತಿಗಳು ಹುಟ್ಟಿಕೊಂಡು ಬಿಟ್ಟಿದ್ದಾರೆ. ಇವರು ತ್ರಿಮೂರ್ತಿಗಳಲ್ಲ, ಉದ್ಭವ ಮೂರ್ತಿಗಳು. ಚುನಾವಣೆ ಮುಗಿದ ಬಳಿಕ ಇವರೆಲ್ಲ ಪತನ ಆಗುತ್ತಾರೆ’

-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News