ಡಿಕೆಶಿಯನ್ನು ಬಂಧಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ: ಜಾರಿ ನಿರ್ದೇಶನಾಲಯ

Update: 2019-03-07 15:07 GMT
ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.7: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದಿಲ್ಲ ಎಂಬ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೈಕೋರ್ಟ್‌ಗೆ ಹೇಳಿಕೆ ನೀಡಿದೆ. ವಿಚಾರಣೆಗೆ ಹಾಜರಾಗಬೇಕೆಂದು ಇಡಿ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಮುಂದಿನ ವಿಚಾರಣೆಯನ್ನು ಮಾ. 11ಕ್ಕೆ ಮುಂದೂಡಲಾಯಿತು.

ಈ ವೇಳೆ ಶಿವಕುಮಾರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, 11ರ ತನಕ ಶಿವಕುಮಾರ್ ಅವರನ್ನು ಬಂಧಿಸುವುದಿಲ್ಲ ಎಂಬ ಭರವಸೆಯನ್ನು ಇಡಿ ಕಡೆಯಿಂದ ಕೊಡಿಸಿ ಎಂದು ನ್ಯಾಯಪೀಠಕ್ಕೆ ವಿನಂತಿಸಿದರು.

ಇದಕ್ಕೆ ಉತ್ತರಿಸಿದ ಇಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಆ ರೀತಿ ಭರವಸೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ಸ್ಪಷ್ಟವಾಗಿ ತಿಳಿಸಿದರು. ಇದಕ್ಕೆ ತೃಪ್ತರಾಗದ ಕಪಿಲ್ ಸಿಬಲ್, ಈ ರೀತಿ ಹೇಳಿದರೆ ಹೇಗೆ, ನಮ್ಮನ್ನು ಅವರು ಯಾವುದೇ ಸಮಯದಲ್ಲಾದರೂ ಬಂಧಿಸಬಹುದು. ಅರ್ಜಿದಾರರಿಗೆ ಸಾಂವಿಧಾನಿಕ ರಕ್ಷಣೆ ಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗಾದರೆ, ಅರ್ಜಿದಾರರು ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಬೇಕು ಎಂದು ಕೋರಿದರೆ ಅದನ್ನು ಪರಿಗಣಿಸಬೇಕು ಎಂದು ಇಡಿಗೆ ನಿರ್ದೇಶಿಸಿತು. ಒಂದು ವೇಳೆ ಏನಾದರೂ ತೊಂದರೆ ಎದುರಾದಲ್ಲಿ ಕೋರ್ಟ್ ಮೊರೆ ಹೋಗಬಹುದು ಎಂದೂ ಸೂಚಿಸಿತು.

ಇದಕ್ಕೂ ಮುನ್ನ ವಾದ ಮಂಡಿಸಿದ ಕಪಿಲ್ ಸಿಬಲ್, ವಿಚಾರಣೆಗೆ ಹಾಜರಾಗುವಂತೆ ಕರೆದಿರುವ ಇಡಿ ಕ್ರಮ ಮೇಲ್ನೋಟಕ್ಕೆ ಕಾನೂನು ಅರಿವಿನಿಂದ ಕೂಡಿಲ್ಲ. ಇಸಿಐಆರ್ (ಜಾರಿ ಪ್ರಕರಣ ಮಾಹಿತಿ ವರದಿ) ಆಂತರಿಕ ದಾಖಲೆಯನ್ನು ನಮಗೆ ನೀಡಿಲ್ಲ ಮತ್ತು ನ್ಯಾಯಪೀಠಕ್ಕೂ ಸಲ್ಲಿಸಿಲ್ಲ. ಹೀಗಿರುವಾಗ ನಮ್ಮನ್ನು ವಿಚಾರಣೆಗೆ ಕರೆಯುವುದು ಎಷ್ಟು ಸರಿ. ಅರ್ಜಿದಾರರಿಗೆ ಪೀಡನೆ ನೀಡುವ ಏಕೈಕ ಉದ್ದೇಶವನ್ನು ಇಡಿ ಹೊಂದಿದೆ ಎಂದು ದೂರಿದರು. ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಎನ್.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News