ವಿಜಯಪುರ: ವಾಹನಗಳನ್ನು ತಡೆದು ದೋಚುತ್ತಿದ್ದ ತಂಡ ಪೊಲೀಸ್ ಬಲೆಗೆ

Update: 2019-03-07 16:20 GMT

ವಿಜಯಪುರ,ಮಾ.7: ರಸ್ತೆಯಲ್ಲಿ ಓಡಾಡುತ್ತಿದ ವಾಹನಗಳನ್ನು ತಡೆದು ಜನರಿಂದ ವಸೂಲಿ ಮಾಡುತ್ತಿದ್ದ ದರೋಡೆಕೋರರ ತಂಡವನ್ನು ಇಂಡಿ ಗ್ರಾಮೀಣ ಪೊಲೀಸರು ಬಲೆಗೆ ಕೆಡವಿದ್ದಾರೆ.

ಇಂಡಿ ತಾಲೂಕಿನ ವಿದ್ಯಾಧರ ಮೇತ್ರಿ, ಕೇದಾರಲಿಂಗ್ ಪಾಟೀಲ್, ಸಾಗರ ಕ್ಷತ್ರಿ, ಸುನೀಲ್, ಸುಂದರ್, ರಮೇಶ್ ಪೂಜಾರಿ, ರಮೇಶ ಸಾತಿಹಾಳ್, ರವಿಕಾಂತ್ ಬಂಧಿತ ದರೋಡೆಕೋರರು. ಬಂಧಿತರಿಂದ ಒಂದು ದೇಶೀಯ ಪಿಸ್ತೂಲ್, 6 ಜೀವಂತ ಗುಂಡು, ತಲವಾರಗಳು ಸೇರಿದಂತೆ ದರೋಡೆಗೆ ಬಳಕೆ ಮಾಡುತ್ತಿದ್ದ ಕಾರೊಂದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇವರು ಆಲಮೇಲ, ಇಂಡಿ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ರಾತ್ರಿ ಹೊತ್ತು ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದರು‌. ಹಣ ಕೊಡದವರನ್ನು ಪಿಸ್ತೂಲ್ ಹಾಗೂ ತಲವಾರ್ ತೋರಿಸಿ ಬೆದರಿಸುತ್ತಿದ್ದರು ಎನ್ನಲಾಗಿದೆ. ಭೀಮಾತೀರದಲ್ಲಿ ಹಂತಕರ ಹಾವಳಿ ಕಡಿಮೆಯಾದ ಮೇಲೆ ಪ್ರಮುಖ ಆರೋಪಿಯಾಗಿರುವ ವಿದ್ಯಾಧರ ಕ್ಷತ್ರಿ ಈ ಗ್ಯಾಂಗ್ ಕಟ್ಟಿಕೊಂಡಿದ್ದ. ಇವರು ದರೋಡೆ ಅಲ್ಲದೆ ಸೂಪಾರಿ ಕೊಲೆ ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

ಈ ಗ್ಯಾಂಗ್ ನಲ್ಲಿರುವ ಬಹುತೇಕರು ಇಂಡಿ ಹಾಗೂ ಸಿಂದಗಿ ಭಾಗದವರು ಎನ್ನಲಾಗಿದ್ದು, ವಿದ್ಯಾಧರ ಚಿಕ್ಕೋಡ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಕೂಡಾ ಆಗಿದ್ದಾನೆ. ಈತನ ಮೇಲೆ ಸೂಪಾರಿ ಕೊಲೆ ಪ್ರಕರಣಗಳು ಇದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News