×
Ad

ಅತಿಥಿ ಸತ್ಕಾರದ ಬಗ್ಗೆ ಅಂಬರೀಶ್ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಾಗಿಲ್ಲ: ಸಚಿವ ತಮ್ಮಣ್ಣರಿಗೆ ಸುಮಲತಾ ತಿರುಗೇಟು

Update: 2019-03-07 22:19 IST

ಮಂಡ್ಯ, ಮಾ.7: ಅಂಬರೀಷ್ ಹೆಸರೇಳಿ ಯಾರ್ಯಾರು ಏನಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಆ ವಿಚಾರ ಇಲ್ಲಿ ಹೇಳೋಕೆ ಇಷ್ಟ ಇಲ್ಲ. ಈ ರೀತಿ ಮಾತಾಡೋದು ಅವರ ಸಂಸ್ಕಾರ. ಮಾತಾಡದೆ ಸುಮ್ಮನಿರೋದು ನನ್ನ ಸಂಸ್ಕಾರ ಎಂದು ಸುಮಲತಾ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ.

ಲೋಕಸಭಾ ಚುನಾವಣೆ ಸ್ಪರ್ಧೆ ಸಂಬಂಧ ಜನಾಭಿಪ್ರಾಯಕ್ಕೆ ಕ್ಷೇತ್ರ ಸಂಚಾರ ಮುಂದುವರಿಸಿರುವ ಸುಮಲತಾ, ಗುರುವಾರ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ ವೇಳೆ ಡಿ.ಸಿ ತಮ್ಮಣ್ಣ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಸಿದರು.

ನಾನು ಅಂಬರೀಷ್ ಅವರ ಮಾರ್ಗದರ್ಶನದಲ್ಲಿ ಹೋಗುತ್ತೇನೆ. ಯಾರ್ಯಾರು ಏನೇನು ಪಡೆದರು ? ಅಂಬರೀಷ್ ಇದ್ದಾಗ ಹೇಗೆ ಇದ್ದರು? ಯಾರು ನಮ್ಮನೆಗೆ ಬರುತ್ತಿದ್ದರು? ಯಾರ ಮನೆಗೆ ನಾವು ಹೋಗಿದ್ದೆವು ಅನ್ನೋದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ನಾನು ಹೇಳಬೇಕಿಲ್ಲ ಎಂದು ಅವರು ಸಚಿವ ತಮ್ಮಣ್ಣಗೆ ತಿರುಗೇಟು ನೀಡಿದರು.

ಅತಿಥಿ ಸತ್ಕಾರ ಏನು ಅಂತ ಅಂಬರೀಷ್ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಾಗಿಲ್ಲ. 24 ಗಂಟೆ ಅತಿಥಿ ಸತ್ಕಾರ ಮಾಡಿರುವವರು ಅಂಬರೀಷ್. ನಾನು ಕೂಡ ಅವರ (ಡಿ.ಸಿ.ತಮ್ಮಣ) ಸೊಸೆ. ನಾನೇನೇ ತಪ್ಪು ಮಾಡಿದ್ದರೆ ನೇರವಾಗಿ ನನ್ನ ಬಳಿಯೇ ಹೇಳಬಹುದಿತ್ತು. ತಪ್ಪಿದ್ರೆ ನಾನೂ ಕೂಡ ತಿದ್ದಿಕೊಳ್ಳುತ್ತಿದ್ದೆ. ಅದು ಬಿಟ್ಟು ಹೀಗೇ ಮಾತಾಡೋದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮಣ್ಣನವರು ನಮ್ಮ ಮನೆಗೆ ಎಷ್ಟು ಸಲ ಬಂದಿದ್ದಾರೆ. ಎಷ್ಟು ಸಲ ನೀರು ಕುಡಿದಿದ್ದಾರೆ. ಊಟ ಮಾಡಿದ್ದಾರೆ. ಅವರ ಮನೆಗೆ ನಾವು ಎಷ್ಟು ಸಲ ಹೋಗಿದ್ದೇವೆ. ಇದೆಲ್ಲವನ್ನೂ ಆ ಕುಟುಂಬದವರೇ ಹೇಳಲಿ. ಬಣ್ಣ ಹಚ್ಚುವವರನ್ನು ನಂಬಬೇಡಿ ಎಂಬುದಾಗಿ ಯಾರಿಗೆ ಹೇಳಿದ್ದಾರೆಂದು ತಮ್ಮಣ್ಣ ಅವರನ್ನೇ ಕೇಳಿ. ಬಣ್ಣ ಹಚ್ಚಿರುವವರು ಬೇರೆ ಯಾರು ಸ್ಪರ್ಧೆಯಲ್ಲಿಲ್ವ? ಎಂದು ಸುಮಲತಾ ಪರೋಕ್ಷವಾಗಿ ನಿಖಿಲ್‍ಗೂ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News