ಶಿವಮೊಗ್ಗ: ವ್ಯಕ್ತಿ ಅನುಮಾನಾಸ್ಪದ ಸಾವು; ಪತ್ನಿಯ ವಿಚಾರಣೆ

Update: 2019-03-07 17:20 GMT

ಶಿವಮೊಗ್ಗ, ಮಾ.7: ವ್ಯಕ್ತಿಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ನಡೆದಿದೆ. 

ಹನುಮಂತನಾಯ್ಕ್ (38) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತರ ಪತ್ನಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಘಟನೆ ಹಿನ್ನೆಲೆ: ಬುಧವಾರ ರಾತ್ರಿ ಹನುಮಂತನಾಯ್ಕ್ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕುಟುಂಬದವರು ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಮರಣೋತ್ತರ ಪರೀಕ್ಷೆಯ ವೇಳೆ ಅವರ ಕುತ್ತಿಗೆ ಭಾಗದಲ್ಲಿ ಕೆಲ ಗುರುತುಗಳಿರುವುದು ಪತ್ತೆಯಾಗಿತ್ತು. ಅವರ ಕುಟುಂಬದವರು ಹಾಗೂ ಸ್ಥಳೀಯ ಗ್ರಾಮಸ್ಥರು ಕೊಲೆ ಅನುಮಾನ ವ್ಯಕ್ತಪಡಿಸಿದ್ದರು. 

ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರಿಗೂ ಮಾಹಿತಿ ರವಾನೆಯಾಗಿತ್ತು. ವಿಷಯ ತಿಳಿದು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದ ಪೊಲೀಸರು, ಮೃತರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ, ಹನುಮಂತನಾಯ್ಕ್ ರವರ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News