ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಜಯ: ಕುಮಾರಸ್ವಾಮಿ ವಿಶ್ವಾಸ

Update: 2019-03-07 17:37 GMT

ಶೃಂಗೇರಿ, ಮಾ.7: ಬುಧವಾರ ಸಂಜೆ ಶೃಂಗೇರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ, ಎಚ್. ಡಿ.ಕುಮಾರಸ್ವಾಮಿ ಕುಟುಂಬದ ಸದಸ್ಯರು ಗುರುವಾರ ಬೆಳಗ್ಗೆ ಶಾರದಾಂಬೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಠದ ಆವರಣದಲ್ಲಿನ ಯಾಗಶಾಲೆ ಯಲ್ಲಿ ಇವರ ಸಂಕಲ್ಪದಂತೆ ಈಗಾಗಲೇ ಕೈಗೊಳ್ಳಲಾಗಿದ್ದ ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮುತ್ತೈದೆಯರ ಹಾಗೂ ಕುಮಾರಿ ಪೂಜೆಯನ್ನು ಅನಿತಾ ಕುಮಾರಸ್ವಾಮಿ ನೆರವೇರಿಸಿದರು. ಬಳಿಕ ಕುಟುಂಬ ಸಮೇತರಾಗಿ ಬೆಟ್ಟದ ಮಲಹಾನಿಕರೇಶ್ವರಸ್ವಾಮಿ ಸನ್ನಿಧಾನ ಮತ್ತು ಕಾಳಿಕಾಂಬ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಸಿಎಂ ಕುಮಾರಸ್ವಾಮಿ, ನಾಡಿನ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಲು ನಾವು ಶೃಂಗೇರಿಗೆ ಬಂದಿದ್ದೇವೆ. ರಾಜ್ಯದಲ್ಲಿ ಹಲವು ಕಡೆ ಬರಗಾಲವಿದ್ದು, ಉತ್ತಮ ಮಳೆ-ಬೆಳೆ ಆಲೆಂದು ತಾಯಿ ಶಾರದೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಗೋಬ್ಯಾಕ್ ಎಂಬ ಶೀರ್ಷಿಕೆ ಇಟ್ಟುಕೊಂಡು ಅಪಪ್ರಚಾರದ ಸ್ಟೇಟಸ್ ಹಾಕಿರುವುದು ವೈರಲ್ ಆಗಿರುವುದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ನಿಖಿಲ್ ರಾಜಕೀಯಕ್ಕೆ ಬರಬೇಕು ಎನ್ನುವವರೂ ಇರುವಂತೆ ಬರಬಾರದೆನ್ನುವರು ಇರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಓಟು ಹಾಕುವವರು ಎಲ್ಲೋ ಇದ್ದರೆ ಈ ಸಾಮಾಜಿಕ ಜಾಲತಾಣವನ್ನು ವ್ಯವಸ್ಥಿತಗೊಳಿಸುವವರು ಇನ್ನೆಲ್ಲೂ ಇದ್ದಾರೆ. ನಮ್ಮ ಪಕ್ಷದ ಮೇಲೆ ವಿಶ್ವಾಸ ಇರುವವರು ನಮಗೇ ಓಟು ಕೊಡುತ್ತಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಂಯುಕ್ತ ಹೋರಾಟಕ್ಕೆ ಒಳ್ಳೆಯ ಜಯ ಸಿಗುವುದೆಂಬ ವಿಶ್ವಾಸವಿದೆ ಎಂದರು.

ಚನ್ನಪಟ್ಟಣದಲ್ಲಿ ಅನುಮಾನಸ್ಪದವಾಗಿ ಕಾರಿನಲ್ಲಿ ಬಂದೂಕು ಹಿಡಿದೊಯ್ದ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಸಾರ್ವಜನಿಕರ ಸ್ಥಳದಲ್ಲಿ ಯಾರಾದರೂ ಬಂದೂಕು ಹಿಡಿದು ಓಡಾಡುತ್ತಿದ್ದಲ್ಲಿ ಅವರನ್ನು ಪೊಲೀಸರು ನಿರ್ಬಂಧಿಸುತ್ತಾರೆ. ಜನರನ್ನು ಭಯಭೀತಗೊಳಿಸಲು ಯಾರಾದರೂ ಪ್ರಯತ್ನ ಮಾಡಿದಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ಬುಧವಾರ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಮುಖಂಡ ತಲವಾನೆ ಪ್ರಕಾಶ್ ಅತಿಥಿ ಗೃಹದಲ್ಲಿ ತಂಗಿದ್ದರು. ಗ್ರಾಮೀಣ ಪ್ರದೇಶವಾಗಿರುವ ಇಲ್ಲಿ ರಾತ್ರಿ 2 ಗಂಟೆಗಳ ಕಾಲ ವಿದ್ಯುತ್ ಮಾಯವಾಗಿದ್ದರಿಂದ ಸಿಎಂ ಚಡಪಡಿಸಿದರು. ವಿದ್ಯುತ್ ಕಡಿತದಿಂದ ಮೊಬೈಲ್ ಟವರ್ ಸ್ಥಗಿತಗೊಂಡು ನೆಟ್‌ವರ್ಕ್ ಇಲ್ಲದೇ ಮುಖ್ಯಮಂತ್ರಿ ಮೆಸ್ಕಾಂ ಮತ್ತು ದೂರಸಂಪರ್ಕ ವ್ಯವಸ್ಥೆ ವಿರುದ್ಧ ಗರಂ ಆದರು.

ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ತಂದೆ ಎಚ್. ಡಿ.ದೇವೇಗೌಡ ಹಾಗೂ ತಾಯಿ ಚೆನ್ನಮ್ಮ ಪಾಲ್ಗೊಂಡಿದ್ದರು. ಗುರುವಾರ ಮಧ್ಯಾಹ್ನದ ವೇಳೆ ಸಿಎಂ ಕುಟುಂಬದವರು ಬೆಂಗಳೂರಿನತ್ತ ತೆರಳಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಧರ್ಮೇಗೌಡ, ಶಾಸಕ ಟಿ.ಡಿ.ರಾಜೇಗೌಡ ಇತರರಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಮನವಿ

ಪಟ್ಟಣದ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಪಂ ವತಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪಪಂ ಅಧ್ಯಕ್ಷೆ ಶಾರದಾ ಗೋಪಾಲ್ ಗುರುವಾರ ಮನವಿ ಸಲ್ಲಿಸಿದರು. ಈಗಾಗಲೇ ಪಪಂನಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆಗೈಯ್ಯುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ಪಟ್ಟಣದ ಗಾಂಧಿ ಮೈದಾನದ ವಾಹನ ನಿಲ್ದಾಣಕ್ಕೆ ಕಾಂಕ್ರೀಟಿಕರಣ ಕಾಮಗಾರಿಗೆ ಅನುದಾನ, ತುಂಗಾ ನದಿಯ ಸ್ನಾನಘಟ್ಟಕ್ಕೆ ಮಾತ್ರ ಪ್ರವೇಶ ಇದ್ದು ಉಳಿಕೆ ನದಿ ಅಂಚಿನಲ್ಲಿ ಜನ ನದಿಗೆ ಇಳಿಯದಂತೆ ಮಠದ ಬಳಿಯಿಂದ ತಡೆಬೇಲಿ ಹಾಕಲು ಅನುದಾನ ನೀಡುವಂತೆ, ಮಸಿಗೆ ಗ್ರಾಮದಲ್ಲಿ ಕ.ರಾ.ರ.ಸಾ ನಿಗಮದ ಡಿಪೋ ಸ್ಥಾಪನೆ ಹಾಗೂ ತನಿಕೋಡು-ಕೆರೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಗ್ಗೆ ತುರ್ತು ಗಮನ ಹರಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ನಿಮ್ಮ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಪರಿಹಾರ ಒದಗಿಸುದಾಗಿ ಭರವಸೆ ನೀಡಿದರು.

ಜೆಡಿಎಸ್ ವರಿಷ್ಠರು ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ ನಂತರವೇ ಮಂಡ್ಯದ ಲೋಕಸಭಾ ಚುನಾವಣೆಗೆ ನನ್ನನ್ನು ಸ್ಪರ್ಧಿಸಲು ಆಯ್ಕೆ ಮಾಡಿದ್ದಾರೆ. ಮಂಡ್ಯದ ಜನತೆಯ ನಾಡಿ ಮಿಡಿತವನ್ನು ನಾನು ಅರ್ಥಾಡಿಕೊಂಡಿದ್ದೇನೆ. ಸಾಮಾಜಿಕ ಜಾಲತಾಣ ಗಳಲ್ಲಿ ಗೋಬ್ಯಾಕ್ ನಿಖಿಲ್ ಆಂದೋಲನ ನಡೆಯುತ್ತಿರುವ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮಂಡ್ಯದ ಜನತೆ ನನ್ನನ್ನು ಪ್ರೀತಿಸುತ್ತಾರೆ. ಅವರ ಸೇವೆಗೆ ನಾನು ಸದಾ ಸಿದ್ಧನಾಗಿದ್ದೇನೆ.
-ನಿಖಿಲ್, ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News