ಪುಲ್ವಾಮ ದಾಳಿ: ಪಾಕಿಸ್ತಾನ ಮತ್ತು ಮೋದಿ ನಡುವೆ ಮ್ಯಾಚ್-ಫಿಕ್ಸಿಂಗ್ ನಡೆದಿತ್ತೇ?

Update: 2019-03-08 11:24 GMT

ಹೊಸದಿಲ್ಲಿ, ಮಾ.8: ಪಾಕಿಸ್ತಾನ ಮತ್ತು ನರೇಂದ್ರ ಮೋದಿಯ ನಡುವೆ ಏನಾದರೂ ಮ್ಯಾಚ್-ಫಿಕ್ಸಿಂಗ್ ನಡೆದಿತ್ತೇ ಎಂಬ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟೀಕರಣ ನೀಡಬೇಕು. ಅವರಿಗೆ ತಿಳಿಯದೆ ಪುಲ್ವಾಮ ಘಟನೆ ನಡೆಯಬಾರದಾಗಿತ್ತು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

‘ಪುಲ್ವಾಮ ನಂತರ ನಡೆದ ಹಲವು ಘಟನೆಗಳನ್ನು ನೋಡಿದಾಗ, ನರೇಂದ್ರ ಮೋದಿ ಪಾಕಿಸ್ತಾನದ ಜನತೆ ಜತೆ ಮ್ಯಾಚ್-ಫಿಕ್ಸಿಂಗ್ ನಡೆಸಿದ್ದಾರೆಂದು ತೋರುತ್ತದೆ’ ಎಂದು ಗುರುವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಹರಿಪ್ರಸಾದ್ ಹೇಳಿದರು.

`ಕಳ್ಳತನ'ವಾದ ರಫೇಲ್ ಕಡತಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗಳಿಗೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿ ಹರಿಪ್ರಸಾದ್ ಮೇಲಿನಂತೆ ಹೇಳಿದ್ದರು.

“ಗುಪ್ತಚರ ವೈಫಲ್ಯವೇ ಪುಲ್ವಾಮ ಘಟನೆಗೆ ಕಾರಣ ಎಂದು ಜಮ್ಮು ಕಾಶ್ಮಿರ ಸರಕಾರ ಬಹಿರಂಗವಾಗಿ ಒಪ್ಪಿಕೊಂಡಿದೆ. ಅವರಿಗೆ ಗೋಮಾಂಸ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್‍ ಡಿಎಕ್ಸ್ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದು ನರೇಂದ್ರ ಮೋದಿ ಸರಕಾರದ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ,'' ಎಂದರು.

ಹರಿಪ್ರಸಾದ್ ಅವರ ಹೇಳಿಕೆ ಬೇಜವಾಬ್ದಾರಿಯುತ ಹಾಗೂ ಖಂಡನೀಯ ಎಂದು ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News