ಏಕಾಏಕಿ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ: ಸ್ಪೀಕರ್ ರಮೇಶ್‌ ಕುಮಾರ್

Update: 2019-03-08 14:07 GMT

ಬೆಂಗಳೂರು, ಮಾ.8: ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ದೂರನ್ನಾಧರಿಸಿ ನಾಲ್ವರು ಶಾಸಕರಿಗೆ ನೋಟಿಸ್ ನೀಡಿದ್ದು, ಮಾ.12ಕ್ಕೆ ವಿಚಾರಣೆ ನಡೆಯಲಿದೆ ಎಂದು ಸ್ಪೀಕರ್ ಕೆ.ಆರ್. ರಮೇಶ್‌ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾಲ್ವರು ಶಾಸಕರಿಗೆ ನೋಟಿಸ್ ನೀಡಿದ್ದು, ಅವರು ಕೆಲವು ವಿವರಣೆ ನೀಡಿದ್ದಾರೆ. ಆದರೂ, ನಾಲ್ವರು ಶಾಸಕರನ್ನು ಕರೆಸಿ ಅವರನ್ನು ವಿಚಾರಣೆ ಮಾಡಲಾಗುತ್ತದೆ. ಈ ಮಧ್ಯೆ ಆ ಪೈಕಿ ಓರ್ವ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು. ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ಮಾ.4ಕ್ಕೆ ನನ್ನ ಗ್ರಾಮಕ್ಕೆ ಬಂದು ರಾಜೀನಾಮೆ ನೀಡಿದರು. ಅಂದು ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸರಕಾರಿ ರಜೆ ಇತ್ತು. ರಾಜೀನಾಮೆ ಪತ್ರ ಸ್ವೀಕರಿಸಿದ್ದೇನೆ. ಆದರೆ, ಇನ್ನೂ ಅಂಗೀಕಾರ ಮಾಡಿಲ್ಲ. ರಾಜೀನಾಮೆ ನೀಡಿರುವ ಜಾಧವ್ ಅವರಿಗೆ ಪತ್ರ ಬರೆದು ವಿವರಣೆ ಕೇಳಿದ್ದೇನೆ ಎಂದರು.

ಶಾಸಕ ಸ್ಥಾನಕ್ಕೆ ಯಾರೇ ರಾಜೀನಾಮೆ ನೀಡಿದರೂ ಅದನ್ನು ಸ್ವೀಕರಿಸುವುದು ನನ್ನ ಕರ್ತವ್ಯ. ಆದರೆ, ಏಕಾಏಕಿ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ. ಪರಿಶೀಲನೆ ಬಳಿಕ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ರಮೇಶ್ ಕುಮಾರ್ ಇದೇ ವೇಳೆ ಸ್ಪಷ್ಟಣೆ ನೀಡಿದರು.

ಅಧಿವೇಶನ ಆರಂಭಕ್ಕೆ ಮೊದಲು ಕೆಲ ಶಾಸಕರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆ ಪೈಕಿ ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ.ನಾಗೇಂದ್ರ, ಚಿಂಚೋಳಿ ಕ್ಷೇತ್ರದ ಉಮೇಶ್ ಜಾಧವ್ ಹಾಗೂ ಮಹೇಶ್ ಕುಮಟಳ್ಳಿ ರಹಸ್ಯ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿತ್ತು.

ಆ ಸಂದರ್ಭದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗಿದ್ದರು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ವಿಪ್ ಉಲ್ಲಂಘನೆ ಸಂಬಂಧ ನಾಲ್ವರು ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು ಎಂದು ವಿವರಣೆ ನೀಡಿದರು.

‘ಸಿಟ್’ ರಚನೆಗೆ ಪತ್ರ: ಆಪರೇಷನ್ ಕಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮಾಡಲು ‘ಸಿಟ್’ ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಮತ್ತೊಮ್ಮೆ ಪತ್ರ ಬರೆದು ನೆನಪಿಸಲಾಗುವುದು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆ ಹಿನ್ನೆಲೆಯಲ್ಲಿ ಆಡಿಯೋ ಪ್ರಕರಣಸಂಬಂಧ ತನಿಖೆ ನಡೆಸುವಂತೆ ಸ್ಪೀಕರ್ ಪೀಠದಿಂದ ಸಲಹೆ ನೀಡಿದ್ದೇನೆ. ಇದುವರೆಗೆ ಈ ಕಾರ್ಯವಾಗಿಲ್ಲ. ಸಿಟ್ ರಚನೆಯಾಗಬಾರದೆಂದು ಸರಕಾರ ಭಾವಿಸಿಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ವಿಳಂಬವಾಗಿದೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News