ಸಚಿವ ರೇವಣ್ಣ ಹೇಳಿಕೆ ರಾಜ್ಯದ ಮಹಿಳೆಯರಿಗೆ ಅವಮಾನ: ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

Update: 2019-03-08 14:21 GMT
ಸಚಿವ ರೇವಣ್ಣ- ಸುಮಲತಾ

ಬೆಂಗಳೂರು, ಮಾ.8: ಇಡೀ ವಿಶ್ವವೇ ಅಂತರ್‌ರಾಷ್ಟ್ರೀಯ ಮಹಿಳೆಯರ ದಿನಾಚರಣೆ ಆಚರಿಸುತ್ತಿದೆ. ಆದರೆ, ಸಚಿವ ಎಚ್.ಡಿ.ರೇವಣ್ಣ ಮಹಿಳೆಯರ ದಿನಾಚರಣೆಯಂದು ಪತಿಯನ್ನು ಕಳೆದುಕೊಂಡ ಸುಮಲತಾ ಅಂಬರೀಶ್‌ಗೆ ಧೈರ್ಯ ಮತ್ತು ಶುಭವಾಗಲೆಂದು ಹೇಳುವುದನ್ನು ಬಿಟ್ಟು, ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಇವರಿಗೆ ರಾಜ್ಯದ, ಸಮಾಜದ ಅಭಿವೃದ್ಧಿ ಬೇಕಾಗಿಲ್ಲ. ಇವರಿಗೇನಿದ್ದರೂ ಕುಟುಂಬ ರಾಜಕಾರಣ ಮತ್ತು ಕುಟುಂಬದ ಅಭಿವೃದ್ಧಿ ಮಾತ್ರ. ಈಗ ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರ ಕುಟುಂಬದವರ ಟಿಕೆಟ್‌ಗಾಗಿ ಬೇರೆ ಯಾರನ್ನೂ ರಾಜಕೀಯವಾಗಿ ಬೆಳೆಯಲು ಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ದೇವೇಗೌಡರ ಕುಟುಂಬ ಹೇಗೆಂದರೆ ಸಿನಿಮಾ ಟಿಕೆಟ್ ಮಾತ್ರ ಜನರಿಗೆ, ಎಂಪಿ, ಎಂಎಲ್‌ಎ, ಎಂಎಲ್‌ಸಿ, ಜಿಲ್ಲಾ ಪಂಚಾಯತ್ ಟಿಕೆಟ್ ಅವರ ಕುಟುಂಬಕ್ಕೆ ಮಾತ್ರ ಎನ್ನುವ ಸಿದ್ಧಾಂತ ಹೊಂದಿದೆ. ಹೀಗಾಗಿ, ದೇವೇಗೌಡರ ಕುಟುಂಬದವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಸಚಿವ ರೇವಣ್ಣ ಸುಮಲತಾ ಅಂಬರೀಶ್ ಅವರಿಗೆ ಕ್ಷಮೆ ಕೇಳಬೇಕೆಂದು ಮಾಧ್ಯಮದವರು ಪ್ರಶ್ನಿಸಿದಾಗ ನಾನೇಕೆ ಕ್ಷಮೆ ಕೇಳಬೇಕು, ನಾನು ಕ್ಷಮೆ ಕೇಳುವುದಿಲ್ಲ, ಇಂತಹ ಡ್ರಾಮಾಗಳನ್ನು ಎಷ್ಟು ನೋಡಿಲ್ಲವೆಂದು ಭಂಡತನ, ಮೊಂಡುತನದಿಂದ ಮಾತನಾಡಿರುವುದು, ಎಷ್ಟರ ಮಟ್ಟಿಗೆ ಸರಿ ? ಇದು ಅವರ ಕುಟುಂಬದ ಅಧಿಕಾರದ ಅಹಂಕಾರ, ದರ್ಪವನ್ನು ಎತ್ತಿ ತೋರಿಸುತ್ತದೆ ಎಂದು ರವಿಕುಮಾರ್ ಹೇಳಿದ್ದಾರೆ.

ರೇವಣ್ಣ ಹೇಳಿಕೆ ಅತ್ಯಂತ ಸಣ್ಣ ಮನಸ್ಸಿನಿಂದ, ದ್ವೇಷದಿಂದ ಕೂಡಿದೆ. ಇವರ ಕುಟುಂಬ ಬಿಟ್ಟು ಬೇರೆ ಯಾರೂ ರಾಜಕೀಯವಾಗಿ ಬೆಳೆಯಬಾರದು. ಹೀಗಾಗಿ ಸುಮಲತಾ ಅಂಬರೀಶ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಅವಮಾನ ಮಾಡಿದಂತೆ, ಹೀಗಾಗಿ ರೇವಣ್ಣ ಕೂಡಲೆ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಲೆ ತಗ್ಗಿಸುವ ವಿಚಾರ

‘ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಟಿ ಸುಮಲತಾ ಅವರ ಕುರಿತು ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದು ಖಂಡನೀಯ. ಪ್ರತಿಯೊಬ್ಬರು ತಲೆ ತಗ್ಗಿಸುವಂತಹ ವಿಚಾರ. ಸಚಿವ ರೇವಣ್ಣನವರ ಇಂತಹ ಅಟ್ಟಹಾಸ, ದರ್ಪದ ನಡವಳಿಕೆ ಒಳ್ಳೆಯದಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಕುಟುಂಬದವರು ಪ್ರತಿಕ್ರಿಯಿಸಬೇಕು’

-ಎಸ್.ಸುರೇಶ್‌ ಕುಮಾರ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News