ಕಾಂಗ್ರೆಸ್ ಟಿಕೆಟ್‍ಗಾಗಿ ಕೊನೆ ಕ್ಷಣದವರೆಗೂ ಕಾಯುತ್ತೇನೆ: ಸುಮಲತಾ ಅಂಬರೀಶ್

Update: 2019-03-08 15:29 GMT

ಮೈಸೂರು,ಮಾ.8: ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ನಾನು ಕೊನೆ ಕ್ಷಣದವರೆಗೂ ಕಾಯುತ್ತೇನೆ ಎಂದು ನಟಿ ಸುಮಲತಾ ಅಂಬರೀಶ್ ಹೇಳಿದರು.

ಲೋಕಸಭಾ ಚುನಾವಣೆ ಸ್ಪರ್ಧೆಗೆ ಸಿದ್ಧತೆ ನಡೆಸಿರುವ ಅವರು ಶುಕ್ರವಾರ ಮೈಸೂರಿನ ಅಧಿತೇವತೆ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಟಿಕೆಟ್‍ಗಾಗಿ ನಾನು ಕೊನೆ ಕ್ಷಣದವರೆಗೂ ಕಾಯುತ್ತೇನೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನಾನು ಟಿಕೆಟ್ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ. ಒಂದೊಂದೆ ಹೆಜ್ಜೆ ಇಟ್ಟು ರಾಜಕೀಯಕ್ಕೆ ಬರುತ್ತಿದ್ದೇನೆ. ಹೆಜ್ಜೆಗಳನ್ನು ನೋಡಿಕೊಂಡೆ ಇಡುತ್ತೇನೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಚರ್ಚೆಯಾಗುತ್ತಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಯಾರಿಗೂ ನೋವಾಗುವಂತ ಮಾತುಗಳು ಬೇಡ. ಯಾರ ಬಗ್ಗೆಯೂ ಅವಮಾನಕರವಾದ ಮಾತುಗಳನ್ನು ಆಡಬೇಡಿ. ಇಂದು ವಿಶ್ವ ಮಹಿಳೆಯರ ದಿನ, ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡದು ಯಾವುದು ಇಲ್ಲ. ತಾಯಿಗೆ ನೋವಾಗುವಂತ ಮಾತುಗಳು ಬೇಡ. ವೈಯಕ್ತಿಕ ಟೀಕೆ ಬೇಡ ಎಂದು ಮನವಿ ಮಾಡಿದರು.

ಅಲ್ಲಿ ಒಬ್ಬರು ತಾಯಿ ಇದ್ದಾರೆ. ಅವರಿಗೂ ನೋವಾಗುತ್ತದೆ. ನಿಖಿಲ್ ಜಾಗದಲ್ಲಿ ನನ್ನ ಮಗನನ್ನು ನಿಲ್ಲಿಸಿ ನೋಡುತ್ತೇನೆ. ನನ್ನ ಮಗನಿಗೆ ಬೈದಾಗ ಎಷ್ಟು ನೋವಾಗುತ್ತೆ ಅಷ್ಟೇ ನೋವು ಆತನ ತಾಯಿಗೂ ಆಗುತ್ತೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವುದರಿಂದ ನೆಮ್ಮದಿ ಸಿಕ್ಕಿದೆ. ಚಿಕ್ಕ ವಯಸ್ಸಿನಿಂದಲೂ ಬೆಟ್ಟಕ್ಕೆ ಬರುತಿದ್ದೇನೆ. ಇಂದು ತಾಯಿಯ ದರ್ಶನ ಮಾಡಿದ್ದು ಮನಸ್ಸಿಗೆ ಸಮಾಧಾನ ತಂದಿದೆ ಎಂದು ಹೇಳಿದರು.

ಬಳಿಕ ನಗರೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಕೋಟೆ ಗಣಪತಿ ದೇವಸ್ಥಾನ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News