ಚಾಮುಂಡಿ ಬೆಟ್ಟಕ್ಕೆ ಆಕಸ್ಮಿಕ ಬೆಂಕಿ: ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಮೈಸೂರು,ಮಾ.8: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರ ಅರೆಬೆಂದ ಶವ ಪತ್ತೆಯಾದ ಘಟನೆ ನಡೆದಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ನಂಜನಗೂಡು ರಸ್ತೆ ಕಡೆ ಬೆಂಕಿ ಧಗ ಧಗಿಸುತ್ತಿದ್ದು, ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದರು.
10 ದಿನಗಳ ಹಿಂದೆಯೂ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕುರುಚಲು ಕಾಡು ಪ್ರದೇಶದಲ್ಲಿ ಬೆಂಕಿ ಹೊತ್ತು ಉರಿಯುತ್ತಿದ್ದು, ಹಲವು ಎಕರೆ ನಾಶವಾಗಿದೆ. ದಾರಿ ಹೋಕರು ಎಸೆಯುವ ಬೀಡಿ, ಸಿಗರೇಟ್ ತುಂಡಿನಿಂದ ಬೆಂಕಿ ಆವರಿಸಿಕೊಂಡಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿತ್ತು. ಆದರೆ ಬೆಂಕಿ ನಂದಿಸಿದ ನಂತರ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಕಾಡಿನೊಳಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಅರೆಬೆಂದ ಸ್ಥಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದೆ.
ಇದರಿಂದ ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಕೊಂದು ಬೆಂಕಿ ಹಚ್ಚಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.