ಮಂಗನ ಕಾಯಿಲೆ: ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಶಾಸಕ ಹರತಾಳು ಹಾಲಪ್ಪ ಒತ್ತಾಯ

Update: 2019-03-08 15:48 GMT

ಬೆಂಗಳೂರು, ಮಾ. 8: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿವಿಧೆಡೆ ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತ್ತಿದ್ದು, ಕಾಯಿಲೆ ನಿಯಂತ್ರಣ ಮಾಡಬೇಕು. ಜತೆಗೆ ಕಾಯಿಲೆಯಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ತಾಲೂಕಿನ ವಿವಿಧೆಡೆ ಮಂಗನ ಕಾಯಿಲೆ ಮಿತಿ ಮೀರುತ್ತಿದೆ. ಇದುವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ. ಈ ಕಾಯಿಲೆ ಇನ್ನು ಹರಡುತ್ತಲೇ ಇದೆ. ಆದರೂ, ಅದರ ನಿಯಂತ್ರಣಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಆ ಭಾಗದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಜನರ ಆತಂಕ ನಿವಾರಣೆ ಮಾಡಬೇಕು. ಸಾಗರದಲ್ಲೇ ಪ್ರಯೋಗಾಲಯವನ್ನು ಸ್ಥಾಪನೆ ಮಾಡಿ ಸೋಂಕಿತರ ರಕ್ತದ ಮಾದರಿಯನ್ನು ತಪಾಸಣೆ ನಡೆಸಿ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.

ಸಾಗರ, ಸೊರಬ, ಸಿದ್ದಾಪುರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಈ ಕಾಯಿಲೆಯಿಂದ ಮೃತಪಟ್ಟವರು ಬಡ ಕುಟುಂಬದವರು. ಅವರು ಜೀವನ ನಿರ್ವಹಣೆಯೆ ಕಷ್ಟಕರ. ಹೀಗಾಗಿ ರಾಜ್ಯ ಸರಕಾರ ಅವರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.

ಮಂಗನ ಕಾಯಿಲೆಯಿಂದ ಮೃತಪಟ್ಟವರ ಕುಟುಂಬದವರಿಗೆ ಕನಿಷ್ಠ ತಲಾ 10 ಲಕ್ಷ ರೂ.ಪರಿಹಾರ ನೀಡಬೇಕೆಂದು ಸಿಎಂ ಕುಮಾರಸ್ವಾಮಿ, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಹಾಲಪ್ಪ ತಿಳಿಸಿದರು.

ಮಂಗನ ಕಾಯಿಲೆಗೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡಬೇಕು. ಮಂಗಗಳಿಗೆ ಹರಡುವ ಕಾಯಿಲೆಯನ್ನು ನಿಯಂತ್ರಣಕ್ಕೆ ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆಗೆ ಕೆಲವು ಸೌಲಭ್ಯಗಳನ್ನು ಒದಗಿಸಿ ಅನುದಾನ ನೀಡಿದಲ್ಲಿ ಮಂಗನ ಕಾಯಿಲೆಯನ್ನು ನಿಯಂತ್ರಣ ಸಾಧ್ಯ. ಆದುದರಿಂದ ಸರಕಾರ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News