ಮಾದಿಗ ಸಮುದಾಯದ ಪ್ರತಿನಿಧಿಗಳು ಸಮ್ಮಿಶ್ರ ಸರಕಾರದಿಂದ ಹೊರಬರಲಿ: ಮಾದಿಗ ಮಹಾಸಭಾ ಆಗ್ರಹ

Update: 2019-03-08 16:01 GMT

ಬೆಂಗಳೂರು, ಮಾ. 8: ನ್ಯಾ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುತ್ತೇವೆ ಎಂದು ಹೇಳಿ ಮಾತು ತಪ್ಪಿದ ಸಮ್ಮಿಶ್ರ ಸರಕಾರದಿಂದ ರಾಜ್ಯ ಮಾದಿಗ ಸಮುದಾಯದ ಪ್ರತಿನಿಧಿಗಳು ಹೊರ ಬರುವಂತೆ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಸಂಚಾಲಕ ಅಂಬಣ್ಣ ಅರೋಲಿಕರ್, ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸನ್ನು ಲೋಕಸಭಾ ಚುನಾವಣೆ ಪೂರ್ವದಲ್ಲಿ ಮಾಡಬೇಕು ಅಥವಾ ರಾಜ್ಯ ಸರಕಾರ ಈಗಿರುವ 101 ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ವಿಸರ್ಜಿಸಿ, 1932ರ ಆಶಯದಂತೆ ಕೇರಳ ಮಾದರಿಯಂತೆ ರಾಜ್ಯದಲ್ಲಿರುವ ಪರಿಶಿಷ್ಟರ ಪಟ್ಟಿಯನ್ನು ಹೊಸದಾಗಿ ತಯಾರಿಸಬೇಕು. ಮಾಡದಿದ್ದಲ್ಲಿ, ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದವರು ಕಾಂಗ್ರೆಸ್‌ನಿಂದ ಹೊರಬಂದು ಅನ್ಯ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಎರಡೂವರೆ ದಶಕಗಳಿಂದ ನಮ್ಮ ಸಮುದಾಯವು ನಿರಂತರವಾಗಿ ಹೋರಾಟವನ್ನು ಕೈಗೆತ್ತಿಕೊಂಡಿದ್ದು, ಹಿಂದುಳಿದ ವರ್ಗಗಳಲ್ಲಿ ಪ್ರವರ್ಗ 1, 2, 3 ವರ್ಗಿಕರಿಸಿದಂತೆ ಪರಿಶಿಷ್ಟ ಜಾತಿಯಲ್ಲೂ ಜನಸಂಖ್ಯಾಧಾರಿತ ಒಳ ಮೀಸಲಾತಿಯನ್ನು ವರ್ಗಿಕರಿಸದಿದ್ದರೆ, ತಳ ಸಮುದಾಯಗಳಲ್ಲಿ ಅಕ್ರಮವಾಗಿ ನುಸುಳುತ್ತಿರುವ ಕೆಲ ಬಲಾಢ್ಯ ಕೋಮುಗಳು ಮೀಸಲಾತಿಯ ಸಿಂಹಪಾಲು ಪಡೆದು, ನೈಜ ಫಲಾನುಭವಿಗಳಾದ ಅಸ್ಪಶ್ಯ ಸಮುದಾಯಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೊಳಪಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಯೋಗದ ವರದಿಯನ್ನು ಅಂಗೀಕರಿಸುವ ವಿಚಾರದಲ್ಲಿ ಬೋವಿ, ಲಂಬಾಣಿ, ಕೊರಮ ಹಾಗೂ ಮಾದಿಗ ಸಮುದಾಯದಲ್ಲಿ ರಾಜಕೀಯ ನಾಯಕರು ಗೊಂದಲಗಳನ್ನು ಸೃಷ್ಟಿಮಾಡಿ ಸಮುದಾಯಗಳಲ್ಲಿ ಸಾಮರಸ್ಯತೆಯನ್ನು ಕದಡುತ್ತಿದ್ದು, ಅದಕ್ಕಾಗಿ ವರದಿಯ ಸತ್ಯಾಂಶ ಬಹಿರಂಗಪಡಿಸುವ ಮುಖಾಂತರ ಪರಿಶಿಷ್ಟ ಸಮುದಾಯಗಳಲ್ಲಿ ಒಗ್ಗಟ್ಟನ್ನು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಅಲ್ಲದೆ, ಸಂವಿಧಾನ ಪರಿಚ್ಚೇದ 162, 16(4)ರನ್ವಯ ರಾಜ್ಯ ಸರಕಾರ ಸರಿಯಾಗಿ ಸಮಾನವಾದ ತಾರತಮ್ಯವಾಗದಂತೆ ನೋಡಿಕೊಳ್ಳುವ ಅಧಿಕಾರವು ರಾಜ್ಯ ಸರಕಾರಕ್ಕೆ ಇದೆ. ಇಂತಹ ವಿಚಕ್ಷಣಾಯುತ ಅಧಿಕಾರದಿಂದಲೇ ಬೇರೆ ರಾಜ್ಯಗಳು ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಿವೆ. ಆದ್ದರಿಂದ ಕರ್ನಾಟಕ ಘನ ಸರಕಾರವು ಪರಿಶಿಷ್ಟ ಜಾತಿ ಸಮುದಾಯದಲ್ಲಿರುವ ಶೇ.15ರ ಮೀಸಲಾತಿಯಲ್ಲಿ ಜನಸಂಖ್ಯಾ ಆಧರಿತ ವರ್ಗಿಕರಣ ಮಾಡಲು ಯಾವ ನ್ಯಾಯಿಕ ಉಲ್ಲಂಘನೆಯೂ ಆಗುವುದಿಲ್ಲ ಎಂದು ಹೇಳಿದರು.

ಹೀಗಾಗಿ, ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳಲ್ಲಿ ಆರ್ಥಿಕ, ಸಾಮಾಜಿಕ ಹಿಂದುಳಿಯುವಿಕೆ ಹಿನ್ನೆಲೆಯಲ್ಲಿ ಜನಸಂಖ್ಯಾವಾರು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಶಾಸನಬದ್ಧವಾಗಿರುವ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಸಂಚಾಲಕರಾದ ನಾಗರಾಜ ಕೋಡಿಗೇಹಳ್ಳಿ, ಶಿವಾನಂದ ಬಿಸನಾಳ, ಸುಬ್ಬಣ್ಣ ಹೊಸಕೋಟೆ, ಮುರುಳಿ ಮೇಲಿಮನಿ, ಮತ್ತಣ್ಣ ಬೆಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News