ಕೇರಳ ಮಾದರಿಯಲ್ಲಿ ‘ಋಣ ಪರಿಹಾರ ಆಯೋಗ’ ಸ್ಥಾಪನೆಗೆ ರಾಜ್ಯ ಸರಕಾರ ಚಿಂತನೆ
ಬೆಂಗಳೂರು, ಮಾ.8: ರೈತರು, ಬಡವರು, ಶ್ರಮಿಕರು, ಕೂಲಿ ಕಾರ್ಮಿಕರು ಮೀಟರ್ ಬಡ್ಡಿ ಮಾಫಿಯಾದಿಂದ ಶಾಶ್ವತ ಮುಕ್ತಿ ಹೊಂದಬೇಕೆನ್ನುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಶಯವಾಗಿದೆ. ಈ ವರ್ಗಗಳ ಜನರನ್ನು ಋಣ ಮುಕ್ತರನ್ನಾಗಿಸಲು ನಮ್ಮ ರಾಜ್ಯದಲ್ಲಿಯೂ ಕೇರಳ ಮಾದರಿಯಲ್ಲಿ ‘ಋಣ ಪರಿಹಾರ ಆಯೋಗ’ವನ್ನು ಸ್ಥಾಪನೆ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ನೇತೃತ್ವದಲ್ಲಿ ಸಹಕಾರ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಶುಕ್ರವಾರ ಕೇರಳದ ತಿರುವನಂತಪುರಕ್ಕೆ ತೆರಳಿ, ಅಲ್ಲಿನ ಮಾದರಿಯ ಅಧ್ಯಯನ ನಡೆಸಿದೆ.
ಕೇರಳ ರಾಜ್ಯದಲ್ಲಿ ಹಲವು ವರ್ಷಗಳಿಂದ ಜಾರಿಯಲ್ಲಿರುವ ಋಣ ಪರಿಹಾರ ಆಯೋಗದ ಕಾರ್ಯವೈಖರಿ ಬಗ್ಗೆ ಅಲ್ಲಿನ ಸರಕಾರದ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅವರು ಮಾಹಿತಿ ಪಡೆದರು. ಅಲ್ಲದೇ, ರಾಜ್ಯದಲ್ಲಿರುವ ಸುಮಾರು 5600 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿ ವರ್ಗದವರಿಗೆ ಪಿಂಚಣಿ ಯೋಜನೆ, ಕಲ್ಯಾಣ ಮಂಡಳಿ ರಚನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಲ್ಲಿನ ಮಾದರಿ ಬಗ್ಗೆ ಈ ವೇಳೆ ಚರ್ಚಿಸಲಾಯಿತು.
ಕೇರಳ ಸಹಕಾರ ಸಚಿವ ಕಡಪಳ್ಳಿ ಸುರೇಂದ್ರನ್, ಅಲ್ಲಿನ ಸಹಕಾರ ಇಲಾಖೆ ಕಾರ್ಯದರ್ಶಿ ಮಿನ್ನೀ, ಸಹಕಾರ ಸಂಘಗಳ ನಿಂಬಂಧಕಿ ಶಹನವಾಝ್ ಸೇರಿದಂತೆ ಕೇರಳ ಅಧಿಕಾರಿಗಳು, ರಾಜ್ಯದ ತಂಡಕ್ಕೆ ಅಗತ್ಯ ಮಾಹಿತಿಗಳನ್ನು ನೀಡಿದರು.
ರಾಜ್ಯ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮಹತ್ವಾಕಾಂಕ್ಷಿ ಕಾಯ್ದೆ ‘ಋಣ ಪರಿಹಾರ ಕಾಯ್ದೆ’2019ರ ಫೆಬ್ರವರಿಯಲ್ಲಿ ನಡೆದ ಬಜೆಟ್ ಅಧಿವೇಶನದ ವೇಳೆ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದ್ದು, ಇದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿದೆ. ರಾಷ್ಟ್ರಪತಿಗಳು ಅಂಕಿತ ಹಾಕಿದ ಮೇಲೆ, ಈ ಕಾಯ್ದೆ ಒಂದು ವರ್ಷಗಳ ಕಾಲ ಮಾತ್ರ ಜಾರಿಯಲ್ಲಿರುತ್ತದೆ.
ಬಂಡೆಪ್ಪ ಕಾಶೆಂಪೂರ್ ನೇತೃತ್ವದ ತಂಡದಲ್ಲಿ ಸಹಕಾರ ಸಂಘಗಳ ನಿಬಂಧಕಿ ಡಾ.ಎನ್.ಮಂಜುಳಾ, ಅಪರ ನಿಬಂಧಕಿ ಕೆ.ಎಂ.ಆಶಾ, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಯತೀಶ್‌ಕುಮಾರ್, ಸಹಕಾರ ಇಲಾಖೆ ಕಾನೂನು ಕೋಶದ ಜಂಟಿ ನಿಬಂಧಕ ಪಾಂಡುರಂಗ ಗರಗ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.