ಮಹಿಳೆಯರು ದುರ್ಬಲರು, ಅಬಲರು ಎಂಬ ಕಾಲ ಇದಲ್ಲ: ನ್ಯಾ.ಈಶಪ್ಪಭೂತೆ

Update: 2019-03-08 16:39 GMT

ಧಾರವಾಡ, ಮಾ.8: ಇಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಮಹಿಳೆಯರು ದುರ್ಬಲರು, ಅಬಲರು ಎಂಬ ಕಾಲ ಇದಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಕೆ.ಭೂತೆ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾಭವನದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕು. ಈಗಾಗಲೇ ಲಕ್ಷಾಂತರ ಮಹಿಳೆಯರು ತಮಗೆ ದೊರೆತ ಅವಕಾಶಗಳನ್ನು ಸರಿಯಾಗಿ ಬಳಸಿಕೊಡು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರೇ ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಯಾವ ಸಮಾಜ, ಕುಟುಂಬ, ಊರಲ್ಲಿ ಮಹಿಳೆಗೆ ಗೌರವ, ಆದ್ಯತೆ ಸಿಗುತ್ತದೆಯೊ ಅಲ್ಲಿ ನೆಮ್ಮದಿ, ಅಭಿವೃದ್ಧಿ ಸಾಧ್ಯವಾಗುತ್ತದೆ. ಧಾರವಾಡ ಜಿಲ್ಲೆಯ ಅನೇಕ ಗ್ರಾಮ ಪಂಚಾಯತ್ ಗಳಲ್ಲಿ ಮಹಿಳಾ ಅಧ್ಯಕ್ಷರಿದ್ದಾರೆ ಇದು ಹೆಮ್ಮೆಯ ಸಂಗತಿ. ರಾಜಕೀಯ, ಶಿಕ್ಷಣ, ವಿವಿಧ ರಂಗಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಜಿಲ್ಲೆಯ ನ್ಯಾಯಾಲಯಗಳಲ್ಲಿ ಸುಮಾರು 8 ಜನ ಮಹಿಳಾ ನ್ಯಾಯಾಧೀಶರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಈಶಪ್ಪ ಭೂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಅಂತರ್‌ರಾಷ್ಟ್ರೀಯ ಮಹಿಳೆಯರ ದಿನದ ಸಂದರ್ಭದಲ್ಲಿ ಮಹಿಳೆಯರ ಸಾಧನೆ ಗುರುತಿಸಿ, ಗೌರವಿಸುವ ಕಾರ್ಯಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಮಹಿಳೆಯ ಪ್ರೀತಿಯನ್ನು ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಎಲ್ಲರೂ ಹಂಚಿಕೊಳ್ಳುತ್ತೇವೆೆ, ಸಮಾಜದಲ್ಲಿ ಮಹಿಳೆಯರ ಹಕ್ಕಿಗಾಗಿ ಹಾಗೂ ಅಭಿವೃದ್ಧಿಗಾಗಿ ಅನೇಕರು ಹೋರಾಡಿದ್ದಾರೆ ಎಂದು ಅವರು ಹೇಳಿದರು.

ಪುರುಷರಂತೆ ಮಹಿಳೆಯರು ಕೂಡಾ ಪೈಲೆಟ್ ಆಗಿದ್ದಾರೆ. ಮಹಿಳೆಯರು ಲಾರಿ ಹಾಗೂ ಮೆಟ್ರೋ ಕೂಡಾ ಚಲಾಯಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ದೀಪಾ ಚೋಳನ್ ತಿಳಿಸಿದರು.

ಕೌಟುಂಬಿಕ ನ್ಯಾಯಾಲಯ ಜಿಲ್ಲಾ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ, ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ.ಆರ್.ಅನಿತಾ, ಹಿರಿಯ ನ್ಯಾಯವಾದಿ ಪ್ರಫುಲ್ಲಾ ಎಸ್.ನಾಯ್ಕಾ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ್, ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿಣ್ಣನ್ನವರ ಆರ್.ಎಸ್, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News