ಮಹಾಘಟಬಂಧನ್ ಅಲ್ಲ, ಸ್ವಾರ್ಥ ಘಟಬಂಧನ್: ಶಿವರಾಜ್‍ ಸಿಂಗ್ ಚೌಹಾಣ್

Update: 2019-03-08 17:00 GMT

ತುಮಕೂರು,ಮಾ.8: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವಭಾರತ ನಿರ್ಮಾಣ ಸಾಕಾರಗೊಳ್ಳುತ್ತಿದೆ. ಈಗಾಗಲೇ ಸಮರ್ಥ, ಸಮೃದ್ಧ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‍ ಸಿಂಗ್ ಚೌಹಾಣ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆಯನ್ನು ನಮ್ಮ ಪಕ್ಷ ಅಥವಾ ಕೆಲವೇ ಕೆಲ ಜನ ರೂಪಿಸಿದ್ದಲ್ಲ, ಸಮಾಜದ ಪ್ರತಿ ಸಮುದಾಯ, ವರ್ಗಗಳ ಅಭಿಪ್ರಾಯ ಆಧರಿಸಿ ರೂಪಿಸಿರುವಂಥದ್ದು ಎಂದು ಹೇಳಿದರು.

ರಾಹುಲ್‍ಗಾಂಧಿ ಅವರಿಗೆ ಪ್ರಶ್ನೆ ಕೇಳಲು ಬಯಸುತ್ತೇನೆ. ಒಂದು ಕಡೆ ಯೋಧರ ಕುಟುಂಬದವರ ಜೊತೆ ಇರುತ್ತೇವೆ ಎನ್ನುತ್ತಾರೆ, ಸರ್ಕಾರದೊಂದಿಗೂ ಇರುತ್ತೇನೆ ಎನ್ನುತ್ತಾರೆ. ಆದರೆ ಅದೇ ಪಕ್ಷದ ಮತ್ತೊಬ್ಬ ಮುಖಂಡ ಬಿ.ಕೆ.ಹರಿಪ್ರಸಾದ್ ಉಗ್ರರ ಪುಲ್ವಾಮ ದಾಳಿಯನ್ನು ಫಿಕ್ಸಿಂಗ್ ಎಂದು ಆರೋಪಿಸುತ್ತಾರೆ. ಹಾಗಾದರೆ ಕಾಂಗ್ರೆಸ್ ಧೋರಣೆ ಏನು ಎಂದು ಪ್ರಶ್ನಿಸಿದರು.

ಕನಿಷ್ಠ ಪಕ್ಷ ಕಾಂಗ್ರೆಸ್‍ನವರು ಯೋಧರ ವಿಷಯದಲ್ಲಾದರೂ ರಾಜಕೀಯ ಮಾಡುವುದು ಬಿಡಲಿ. ಮನಸೋ ಇಚ್ಛೆ ಹೇಳಿಕೆ ನೀಡಿದವರ ವಿರುದ್ಧ ಏನು ಕ್ರಮ ಜರುಗಿಸಿದ್ದೀರ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಕರ್ನಾಟಕದ ಮುಖ್ಯಮಂತ್ರಿ ಮೊದಲು 125 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು, ಅದೂ 24 ತಾಸಲ್ಲಿ ಎಂದಿದ್ದರು. ಆದರೆ ಚುನಾವಣೆ ಬಳಿಕ ಕೇವಲ 43 ಸಾವಿರ ಕೋಟಿ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಅದೂ ಕೂಡಾ ಸರಿಯಾಗಿ ನಡೆಯುತ್ತಿಲ್ಲ. ಮಧ್ಯಪ್ರದೇಶ, ಕರ್ನಾಟಕದಲ್ಲಿ ಸುಳ್ಳಿನ ಮೇಲೆ ಸರ್ಕಾರ ರಚನೆ ಮಾಡಿ ನಡೆಸುತ್ತಿದ್ದರೆ. ಆದರೆ ಇದು ಬಹಳ ದಿನ ಇರಲ್ಲ. ಕಾಂಗ್ರೆಸ್ ಪಕ್ಷ ಮತ್ತು ಇತರ ಪಕ್ಷಗಳ ಮೈತ್ರಿ ಮಹಾ ಘಟಬಂಧನ್ ಅಲ್ಲ, ಸ್ವಾರ್ಥ ಘಟಬಂಧನ್ ಎಂದರು.

ಈಗ ನಮ್ಮ ಸಂಕಲ್ಪ ಪತ್ರ ರೂಪುಗೊಳ್ಳುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಬಗ್ಗೆ ಪ್ರಣಾಳಿಕೆ ರಚನೆ ಹಂತದಲ್ಲಿ ನಿರ್ಧಾರವಾಗುತ್ತದೆ. ಸ್ವಾಮಿನಾಥನ್ ವರದಿ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡು ರೈತರ ಏಳಿಗೆಗೆ ಪೂರಕ ಕೆಲಸ ಮಾಡುತ್ತಿದೆ. ಫಸಲ್ ಭಿಮಾ ಯೋಜನೆ, ರೈತರ ಖಾತೆಗೆ ಹಣ ಜಮಾ, ಎಂಎಸ್ಪಿ ಮುಂತಾದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಮಾಧುಸ್ವಾಮಿ, ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಕೆ.ಎಸ್.ಕಿರಣ್‍ ಕುಮಾರ್, ಹುಲಿನಾಯ್ಕರ್, ಮುಖಂಡ ಬೆಟ್ಟಸ್ವಾಮಿ, ಹುಚ್ಚಯ್ಯ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News