ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಬಾರದು: ಸುಮಲತಾ ಅಂಬರೀಷ್

Update: 2019-03-08 17:14 GMT

ಮಂಡ್ಯ, ಮಾ.8: ಮಹಿಳೆಯರ ದಿನ ಅಂತ ಅಲ್ಲ, ಮಹಿಳೆಯರ ಬಗ್ಗೆ ಯಾವ ದಿನವೂ ಯಾರೂ ಕೂಡ ಲಘುವಾಗಿ ಈ ರೀತಿಯ ಮಾತುಗಳನ್ನು ಆಡಬಾರದು. ನಮ್ಮ ಸಂಸ್ಕೃತಿ, ವೇದಗಳಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ಇದೆ. ಸಚಿವ ಎಚ್.ಡಿ.ರೇವಣ್ಣ ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲವೆಂದು ನಟಿ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಏನೇ ಮಾತಾಡಿದರೂ ಜನರಿಗೆ ಸಂದೇಶ ಹೋಗುತ್ತೆ. ನಾವೆಲ್ಲಾ ಸಾಮಾಜಿಕ ಕ್ಷೇತ್ರದಲ್ಲಿರುವಂತವರು. ಮಾತನಾಡುವಾಗ ಯೋಚಿಸಿ ಮಾತಾಡಬೇಕು ಎಂದು ಸಲಹೆ ನೀಡಿದರು.

ನಾನು ಯಾವತ್ತೂ ಯಾರನ್ನು ಟೀಕಿಸಿಲ್ಲ. ಟೀಕೆ ಮಾಡುವಂತಹ ಸಂಸ್ಕಾರ ಅಂಬರೀಷ್ ಅವರದ್ದಾಗಿರಲಿಲ್ಲ, ನಾನು ಕೂಡ ಅವರ ಮಾರ್ಗದಲ್ಲೇ ಹೋಗುತ್ತೇನೆ. ರೇವಣ್ಣ ಅವರು ಏನು ಮಾತನಾಡುತ್ತಾರೋ ಅವರಿಗೆ ಬಿಟ್ಟಿದ್ದು, ನಾನು ಯಾವತ್ತೂ ಯಾರಿಗೂ ಸವಾಲು ಹಾಕಿಲ್ಲ, ಹಾಕುವುದೂ ಇಲ್ಲ ಎಂದು ಅವರು ತಿಳಿಸಿದರು.

ಯಾವುದೇ ಪಕ್ಷವಾಗಲೀ, ವ್ಯಕ್ತಿಯಾಗಲೀ ನಾನು ಟೀಕೆ ಮಾಡಲು ಹೋಗುವುದಿಲ್ಲ. ಈ ಬಗ್ಗೆ ಯಾರಾದರೂ ನಿರೀಕ್ಷೆ ಇಟ್ಟುಕೊಂಡಿದ್ದರೆ ಅವರಿಗೆ ಖಂಡಿತ ನಿರಾಶೆಯಾಗುತ್ತೆ. ಎಲ್ಲವನ್ನೂ ಜನ, ಸಮಾಜ ತೀರ್ಮಾನ ಮಾಡುತ್ತಾರೆ ಎಂದು ಸುಮಲತಾ ಪ್ರತಿಕ್ರಿಯಿಸಿದರು.

ನನ್ನಲ್ಲಿ ಯಾವುದೇ ತಪ್ಪಿಲ್ಲ. ನನ್ನಲ್ಲಿ ತಪ್ಪಿದ್ದರೆ ನಾನು ಬೇಜಾರು ಮಾಡಿಕೊಳ್ಳಬೇಕು. ನಾನು ಯಾವತ್ತೂ ಯಾರಿಗೂ ಸವಾಲಾಕಿಲ್ಲ, ಯಾರನ್ನೂ ವಿರೋಧ ಮಾಡಲ್ಲ. ವಿವಾದ ಕೂಡ ಮಾಡಲ್ಲ. ಯಾರು ಏನೇ ಮಾತಾಡಿಕೊಳ್ಳಲಿ ನಾನಂತೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಪ್ರಚೋಧನಾಕಾರಿ ಹೇಳಿಕೆ ನೀಡಿ, ನನ್ನಿಂದ ಬೇರೆಯದೆ ಮಾತುಗಳನ್ನಾಡಿಸುವ ಯತ್ನ ಸಫಲವಾಗಲ್ಲ. ನನ್ನ ಆತ್ಮಸ್ಥೈರ್ಯ ಕುಗ್ಗಿಸಲೂ ಆಗಲ್ಲ ಎಂದವರು ನುಡಿದರು.

ಮಾಧ್ಯಮದವರಿಗೆ ಹೆಚ್ಚು ಜವಾಬ್ದಾರಿ ಇದೆ. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುದನ್ನು ಪರಾಮರ್ಶಿಸಬೇಕು. ಪಕ್ಷ, ವ್ಯಕ್ತಿ ಪರ ವಿರೋಧ ನೋಡದೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವತ್ತ ಗಮನಹರಿಸಬೇಕು ಅವರು ಮನವಿ ಮಾಡಿದರು.

ಪ್ರೊ.ಬಿ.ಶಿವಲಿಂಗಯ್ಯ ಮನೆಗೆ ಭೇಟಿ: ಒಂದು ವಾರಗಳ ಕಾಲದ ಜಿಲ್ಲಾ ಪ್ರವಾಸದಲ್ಲಿ ಹಲವು ರಾಜಕೀಯ ಮುಖಂಡರ ಮನೆ ಬಾಗಿಲು ತಲುಪಿರುವ ಸುಮಲತಾ, ಶುಕ್ರವಾರ ಬಿಜೆಪಿ ಮುಖಂಡ ಪ್ರೊ.ಬಿ.ಶಿವಲಿಂಗಯ್ಯ, ಇತರೆ ಮುಖಂಡರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸುವ ಜೊತೆಗೆ ಆತಿಥ್ಯ ಸ್ವೀಕಾರ ಮಾಡಿ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News