ನನ್ನ ಬಳಿ ಅಸ್ತ್ರಗಳಿವೆ, ಮುಂದಿನ ದಿನಗಳಲ್ಲಿ ಪ್ರಯೋಗಿಸುತ್ತೇನೆ: ಉಮೇಶ್ ಜಾಧವ್
ಕಲಬುರ್ಗಿ, ಮಾ. 9: ಶಾಸಕ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆ ಕಾನೂನು ಪ್ರಕಾರ ಅಂಗೀಕಾರವಾಗಲಿದೆ. ಆದರೆ, ಅಗತ್ಯವಿದ್ದರೆ ಮಾ.12ಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರ ವಿಚಾರಣೆಗೂ ಹಾಜರಾಗುತ್ತೇನೆ ಎಂದು ಡಾ.ಉಮೇಶ್ ಜಾಧವ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶಕುಮಾರ್ ಅವರು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ನ್ಯಾಯಯುತವಾಗಿ ನಾನು ನೀಡಿರುವ ರಾಜೀನಾಮೆಯ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದರು.
ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಿಗೆ ಸಂಬಂಧಿಸಿದಂತೆ ವಿಪ್ ಉಲ್ಲಂಘನೆ ಪ್ರಕರಣ ಸಂಬಂಧ ನನಗೆ ಇದುವರೆಗೂ ಸ್ಪೀಕರ್ ಅವರ ನೋಟಿಸ್ ತಲುಪಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಗಮನಿಸಿದ್ದು, ಅಗತ್ಯಬಿದ್ದರೆ ಮಾ.12ರಂದು ವಿಚಾರಣೆಗೆ ಹಾಜರಾಗುವೆ ಎಂದರು.
ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ರೀತಿಯಲ್ಲಿ ಪ್ರೈವೇಟ್ ಲಿಮಿಟೆಡ್ ಕಂಪೆನಿಯಾಗಿದೆ. ತಮ್ಮ ಅನುಕೂಲಕ್ಕಾಗಿ ಅನೇಕ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷ ಟೀಕೆ ಮಾಡಿದರು.
‘ಉಮೇಶ ಜಾಧವ ಅಲ್ಲ, ಆಮಿಷ್ ಜಾಧವ್’ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕೆಗೆ ಪ್ರತಿಕ್ರಿಯಿಸಿದ ಜಾಧವ್, ‘ಬಿಜೆಪಿಯವರಿಂದ ಹಣ ಪಡೆದಿದ್ದರೆ ತನಿಖೆ ನಡೆಸಲಿ. ಅದುಬಿಟ್ಟು ವಿನಾಕಾರಣ ಆರೋಪ ಮಾಡುವುದನ್ನು ನಿಲ್ಲಿಸಲಿ. ನನ್ನ ಬಳಿ ಅಸ್ತ್ರಗಳಿವೆ, ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರಯೋಗಿಸುತ್ತೇನೆ’ ಎಂದು ತಿರುಗೇಟು ನೀಡಿದರು.