ಮನುಷ್ಯತ್ವ ಇರುವವರು ಹಿಂದೂಗಳು: ಸಿದ್ದರಾಮಯ್ಯ
ಹುಬ್ಬಳ್ಳಿ, ಮಾ.9: ನಾನು ತಿಲಕ ಇಡುವವರ ಬಗ್ಗೆಯಲ್ಲ, ನಾಮ ಹಾಕುವವರನ್ನು ಕಂಡರೆ ಭಯ ಎಂದು ಹೇಳಿದ್ದೆ. ಈ ಬಗ್ಗೆ ಮಾತನಾಡಿದ ತಕ್ಷಣ ಹಿಂದೂ ವಿರೋಧಿಯಾಗುತ್ತಾರೆಯೇ? ನನಗಿಂತಲೂ ಹಿಂದೂ ಯಾರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ನಗರದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಮನುಷ್ಯತ್ವ ಇರುವವರು ಹಿಂದೂಗಳು. ನಾಮವನ್ನು ಅಪರಾಧಿಗಳು ಹಾಕುತ್ತಾರೆ. ಯಾತಕ್ಕಾಗಿ ಅವರು ನಾಮವನ್ನು ಹಾಕಿರುತ್ತಾರೆ ಹೇಳಿ ಎಂದು ಪ್ರಶ್ನಿಸಿದರು.
ರಫೇಲ್ ಯುದ್ಧ ವಿಮಾನದ ಖರೀದಿಗೆ ಸಂಬಂಧಿಸಿದ ದಾಖಲೆಗಳು ಕಳುವಾಗಿರುವುದಾಗಿ ಬಿಜೆಪಿಯವರು ಹೇಳುತ್ತಾರೆ. ಮತ್ತೊಮ್ಮೆ ನಾವು ಅದರ ಫೋಟೋ ಕಾಪಿ ತೆಗೆದಿದ್ದೇವೆ ಎನ್ನುತ್ತಾರೆ. ಇವರ ಯಾವ ಮಾತುಗಳನ್ನು ನಂಬುವುದು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ದಾಖಲೆಗಳು ಕಳುವಾಗಿದೆ ಎಂದರೆ, ಏನೋ ತಪ್ಪು ಮಾಡಿದ್ದಾರೆ ಎಂದರ್ಥವಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು.
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯ ಬಳಿಕ ಸೈನಿಕರು ನಡೆಸಿದ ಕಾರ್ಯಾಚರಣೆಯಿಂದಾಗಿ ನಮ್ಮ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಸೈನಿಕರು ಹಾಗೂ ರೈತರ ಬಗ್ಗೆ ನಮಗಿರುವಷ್ಟು ಗೌರವ ಇವರಿಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಯೋಧರ ಬಲಿದಾನವಾಗಿದೆ. ಅದನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಮೊಳಗಿಸಿದ್ದು ಕಾಂಗ್ರೆಸ್ಸಿನ ಲಾಲ್ ಬಹದ್ದೂರ್ ಶಾಸ್ತ್ರಿ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿರಲಿ, ದೇಶದ ರಕ್ಷಣೆ ನಮ್ಮ ಪ್ರಥಮ ಆದ್ಯತೆಯಾಗಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.