×
Ad

ದೇವೇಗೌಡ ಕುಟುಂಬಕ್ಕೆ ರಾಜ್ಯ, ದೇಶ ಆಳಬೇಕೆಂಬ ಸ್ವಾರ್ಥವಿದೆ: ಶಾಸಕ ಯತ್ನಾಳ್

Update: 2019-03-09 22:29 IST

ವಿಜಯಪುರ,ಮಾ.9: ಇಡೀ ರಾಜ್ಯ ಹಾಗೂ ದೇಶ ಆಳಬೇಕು ಎನ್ನುವ ಸ್ವಾರ್ಥ ಹೆಚ್.ಡಿ ದೇವೇಗೌಡ ಕುಟುಂಬಕ್ಕೆ ಇದೆ. ಮಹಿಳಾ ದಿನವೇ ಮಹಿಳೆಯರಿಗೆ ಹೆಚ್.ಡಿ ರೇವಣ್ಣ ಅವಮಾನ ಮಾಡಿದ್ದಾರೆ ಎಂದು ಸುಮಲತಾ ವಿರುದ್ಧ ರೇವಣ್ಣ ನೀಡಿದ್ದ ಹೇಳಿಕೆಗೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.  

ತಮ್ಮ ಪಕ್ಷದ ಶಾಸಕರು ನಿಧನರಾದಾಗ ಅವರ ಮನೆಯವರಿಗೆ ಇವರೇ ಟಿಕೇಟ್ ನೀಡಿದ್ದಾರೆ. ಅಂಬರೀಷ್ ಅವರು ಕರ್ನಾಟಕದ ದಾನ‌ಶೂರ ಕರ್ಣ. ಹಾಗಾಗಿಯೇ ಅವರಿಗೆ ಮಂಡ್ಯದ ಗಂಡು ಎಂದು ಹೆಸರು ಬಂದಿದೆ. ಈಗ ಅವರ ಮನೆಯವರು ಟಿಕೇಟ್ ಕೇಳುವುದು ತಪ್ಪಲ್ಲ ಎಂದು ಹೇಳಿದ್ದಾರೆ.

ರೇವಣ್ಣ ಅವರು ಈ ರೀತಿ ಅವಮಾನ ಮಾಡಿದ್ದು ಹೆಚ್.ಡಿ.ಡಿ ಕುಟುಂಬಕ್ಕೆ ಶೋಭೆ ತರುವುದಿಲ್ಲ. ಸಚಿವ ರೇವಣ್ಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಈ ರೀತಿಯ ಉದ್ಧಟತನದ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಗೆ ದೇವೇಗೌಡ ಅವರು ಕಡಿವಾಣ ಹಾಕಬೇಕು. ಇದು ಒಳ್ಳೆಯ ಸಂಸ್ಕ್ರತಿಯನ್ನು ಬಿಂಬಿಸುವುದಿಲ್ಲ ಎಂದರು.

ರಾಹುಲ್‌ ಪ್ರಧಾನಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ರಾಹುಲ್ ಗಾಂಧಿಯನ್ನು ಯಾರು ಕೇಳ್ತಾರೆ? ಅದೊಂದು ಈ ದೇಶದಲ್ಲಿ ಜೋಕರ್ ಇದ್ದ ಹಾಗೆ. ಪ್ರಧಾನಿ‌ ಮೋದಿಗೆ ರಾಹುಲ್ ಗಾಂಧಿಯನ್ನು ಹೋಲಿಸಲು ಸಾಧ್ಯವೇ ಇಲ್ಲ ಎಂದ ಅವರು, ಸುಮಲತಾ ಬಿಜೆಪಿಗೆ ಬರುವ ಬಗ್ಗೆ ಪಕ್ಷ ನಿರ್ಣಯ ಮಾಡುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸುಮಲತಾಗೆ ಅವಮಾನ ಮಾಡಿದೆ. ಪ್ರಧಾನಿ ಮೋದಿ ಸಾಧನೆ ನೋಡಿ ಸುಮಲತಾ ಬಿಜೆಪಿಗೆ ಬರಬಹುದು. ಸುಮಲತಾ ಬಿಜೆಪಿಗೆ ಬಂದರೆ ಗೌರವ ಕೊಟ್ಟು ಹೈಕಮಾಂಟ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಭರವಸೆ ಇದೆ. ಸುಮಲತಾ ಅವರಿಗೆ ದೋಸ್ತಿ ಸರ್ಕಾರ ಮಾಡಿರುವ ಅಪಮಾನಕ್ಕೆ ಬಿಜೆಪಿ ಅವಕಾಶ ಕೊಟ್ಟು ಸೇಡು ತಿರಿಸಿಕೊಳ್ಳಲು ಅನುಕೂಲ ಮಾಡಿ ಕೊಡಲಿದೆ ಎಂದು ಯತ್ನಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News