ಮಹಿಳೆಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಸಿಗದಂತೆ ವಂಚನೆ: ಲೇಖಕಿ ಕೆ.ಆರ್.ಸೌಮ್ಯ
ಕೋಲಾರ,ಮಾ.9: ಭಾರತೀಯ ಸಮಾಜದಲ್ಲಿ ಮಹಿಳೆ ಅಭಿವೃದ್ಧಿಯಾಗದಂತೆ ತಡೆಯುವ, ದೌರ್ಜನ್ಯ ಹಾಗೂ ಶೋಷಣೆಯ ರೂಪಗಳು ಬದಲಾಗಿದೆ ಎಂದು ಸಮಾಜ ಚಿಂತಕಿ ಹಾಗೂ ಲೇಖಕಿ ಕೆ.ಆರ್.ಸೌಮ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮಾರ್ಜೇನಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿ - ಕರ್ನಾಟಕ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಮಹಿಳಾ ಹಕ್ಕುಗಳು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಇಂದಿಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕಡಿಮೆ ಆಗಿಲ್ಲ. ಕಾಲ ಬದಲಾದಂತೆ ಮಹಿಳೆಯರ ಮೇಲಿನ ಶೋಷಣೆಯ ರೂಪಗಳು ಬದಲಾಗಿದೆ ಎಂದರು.
ಹೆಣ್ಣು ಸಹನೆಯಿಂದ ಸಹಿಸಿಕೊಂಡು ಇರುವುದು ಸಹ ಶೋಷಣೆಗೆ ಪುಷ್ಟಿ ನೀಡಿದಂತೆ ಎಂದ ಅವರು, ಮಹಿಳೆಗೆ ಅಕ್ಷರ ಕಲಿಸಿದ ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆರವರ ಕ್ರಾಂತಿಕಾರಿ ಚಿಂತನೆಗಳು ಮತ್ತು ಹೆಣ್ಣು ಗಂಡಿನ ಸಮಾನತೆಯನ್ನು ಎತ್ತಿ ಹಿಡಿದ ಅಂಬೇಡ್ಕರ್ ರಚಿಸಿದ ಸಂವಿಧಾನದ ಬಗ್ಗೆ ಮಹಿಳೆಗೆ ಅರಿವು ಸಿಗದಂತೆ ವ್ಯವಸ್ಥೆ ಪ್ರಜ್ಞಾಪೂರ್ವಕವಾಗಿ ವಂಚನೆ ಮಾಡಿದೆ ಎಂದು ತಿಳಿಸಿದರು.
ಭಾರತೀಯ ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಯರು ಯಾವ ಬಟ್ಟೆ ಧರಿಸಬೇಕು ಅನ್ನುವ ಕಾನೂನು ಇರುವುದೇ ವಿಪರ್ಯಾಸ. ಮಹಿಳೆ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಂಡು ಘನತೆಯ ಬದುಕುಗಳನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಇಂದು ಸಮಾಜದಲ್ಲಿ ಜಾತಿ ಧರ್ಮ, ಲಿಂಗತ್ವದ ಹೆಸರಿನಲ್ಲಿ ಕೀಳರಿಮೆಯ ಭಾವನೆಗಳನ್ನು ತುಂಬಿಸಲಾಗುತ್ತಿದೆ. ಮತ್ತೊಂದು ಕಡೆ ದೇಶ ಭಕ್ತಿಯ ಹೆಸರಿನಲ್ಲಿ ದೇಶ ನಾಶ ಮಾಡಲಾಗುತ್ತಿದೆ. ಬ್ರಿಟೀಷರ ಆಗಮನಕ್ಕೂ ಮುನ್ನ ಸಣ್ಣ ಸಣ್ಣ ದೇಶಗಳಾಗಿ ಭಾಷಾವಾರು ಪ್ರಾಂತ್ಯಗಳಾಗಿ ಬಿಡಿ ಬಿಡಿಯಾಗಿ ಇದ್ದ ದೇಶವನ್ನು ಒಟ್ಟಿಗೆ ಆಳಿದ ಬ್ರಿಟೀಷರು, ಬಿಟ್ಟು ಹೋದ ವೇಳೆ ಮತ್ತೆ ಆ ಎಲ್ಲಾ ದೇಶಗಳನ್ನು ಕೂಡಿಸಿ ಅಖಂಡ ಭಾರತವನ್ನಾಗಿಸಿದ್ದು ಸಂವಿಧಾನ. ಇಂದು ಸಂವಿಧಾನ ಅಪಾಯದಲ್ಲಿದೆ. ಅಖಂಡ ಭಾರತವನ್ನು ಉಳಿಸಬೇಕೆಂದರೆ ಸಂವಿಧಾನ ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ವಿಜಯಮ್ಮ, ಉಪನ್ಯಾಸಕ ಜೆ. ಜಿ.ನಾಗರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷೆ ಉಮಾದೇವಿ, ವಿಭಾಗೀಯ ಸಂಚಾಲಕ ಹಿರೇಕರಪನಹಳ್ಳಿ ಯಲ್ಲಪ್ಪ, ಮಾರ್ಜೇನಹಳ್ಳಿ ಮುನಿಸ್ವಾಮಿ, ಬಸಪ್ಪ, ನಾಗಪ್ಪ ಹಾಜರಿದ್ದರು.