ರಾಜಕಾರಣವನ್ನು ಶೋಕಿಗಾಗಿ ಮಾಡಲು ಬಂದಿಲ್ಲ: ನಿಖಿಲ್ ಕುಮಾರಸ್ವಾಮಿ

Update: 2019-03-09 17:18 GMT

ಮಂಡ್ಯ,ಮಾ.9: ನಾನು ಅಭ್ಯರ್ಥಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಇದು ಪಕ್ಷದ ತೀರ್ಮಾನ ಎಂದು ಜೆಡಿಎಸ್ ಲೋಕಸಭಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಳವಳ್ಳಿಯಲ್ಲಿ ನಡೆದ ಜೆಡಿಎಸ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಜೀವನದಲ್ಲಿ ಸ್ವಾಭಿಮಾನ ಜಾಸ್ತಿ. ಜಿಲ್ಲೆಯ ಎಲ್ಲ ನಾಯಕರ ಒಪ್ಪಿಗೆ ಪಡೆದು ನಿರ್ಧಾರ ಮಾಡಿ ಎಂದು ದೊಡ್ಡವರಿಗೆ, ತಂದೆಗೆ ಹೇಳಿದ್ದೆ. ನಮ್ಮ ತಂದೆ ಸಿಎಂ ಆದ ಮಾತ್ರಕ್ಕೆ ಮಗನನ್ನು ರಾಜಕೀಯಕ್ಕೆ ತಂದಿಲ್ಲ. ನಾನು ರಾಜಕಾರಣವನ್ನು ಶೋಕಿಗಾಗಿ ಮಾಡಲು ಬಂದಿಲ್ಲ. ಕೇವಲ ನಟನಾಗಿ ಕಾಲ ಕಳೆಯಬಹುದಿತ್ತು ಎಂದು ಹೇಳಿದರು. 

ನಾನು ಈ ಕುಟುಂಬದಲ್ಲಿ ಹುಟ್ಟಿರುವುದು ನನ್ನ ಪುಣ್ಯ. ನಿಮ್ಮೆಲ್ಲರ ಗುಲಾಮನಾಗಿ, ಸೇವೆ ಮಾಡಲು ಬಂದಿದ್ದೇನೆ. ಕಳೆದ ಎರಡು ಚುನಾವಣೆಯಿಂದಲೂ ನನಗೆ ಒತ್ತಡ ಇತ್ತು. ಆಗಲೇ ಒಪ್ಪಿದ್ದರೆ ನಾನು ಶಾಸಕ ಆಗುತ್ತಿದ್ದೆನೋ ಏನೋ ಎಂದ ಅವರು, ಮಗನ ರಾಜಕೀಯಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದಲ್ಲ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ. ಮಂಡ್ಯ ಜನರ ಋಣ ತೀರಿಸಲು ನಮ್ಮಿಂದ ಸಾಧ್ಯವೇ ಇಲ್ಲ. ಟೀಕೆ ಮಾಡುವವರು ಯೋಚನೆ ಮಾಡಿ ಟೀಕೆ ಮಾಡಬೇಕು ಎಂದು ತಿರುಗೇಟು ನೀಡಿದರು. 

ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಸರಣಿ ಸುದ್ದಿಯಾಗುತ್ತಿದೆ. ಅಂಬಿ ಅಣ್ಣನನ್ನು ಕಳೆದುಕೊಂಡ ನಮಗೆಲ್ಲ ತುಂಬಾ ನೋವಾಗಿದೆ. ಕುಮಾರಸ್ವಾಮಿ ಸಿಎಂ ಆಗಿ, ಅಂಬಿ ಸ್ನೇಹಿತರಾಗಿ ನಡೆದುಕೊಂಡದ್ದನ್ನು ನೀವೇ ನೋಡಿದ್ದೀರ. ನಾನೊಬ್ಬ ಮನುಷ್ಯನಾಗಿ, ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಯಾರೇ ನಿಲ್ಲಲಿ, ಒಳ್ಳೆಯ ಮನಸ್ಸಿನಿಂದ ಸ್ವಾಗತಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಅಂತಿಮವಾಗಿ ತೀರ್ಪು ನೀಡುವುದು ನೀವು. ತೀರ್ಪು ಏನೇ ಆದರೂ ಅದನ್ನು ನಾವು ಪ್ರೀತಿಯಿಂದ ಸ್ವಾಗತಿಸುತ್ತೇನೆ. ನನ್ನನ್ನು ಲೋಕಸಭಾ ಸದಸ್ಯನಾಗಿ ಆಯ್ಕೆ ಮಾಡಿದರೆ ನಿಮಗೆ ನಾನು ಋಣಿಯಾಗಿರುತ್ತೇನೆ. ನನಗೆ ಇದೊಂದು ಬಾರಿ ಅವಕಾಶ ಮಾಡಿಕೊಡಿ ಕೊಡಿ ಎಂದು ಮನವಿ ಮಾಡಿದ ಅವರು, ಕುಮಾರಣ್ಣನಿಗೆ ಜನ್ಮಕೊಟ್ಟಿದ್ದು ರಾಮನಗರ ಜಿಲ್ಲೆ. ಮರು ಜನ್ಮ ಕೊಟ್ಟಿದ್ದು ಮಂಡ್ಯ ಜಿಲ್ಲೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿ. ಜಾತ್ಯಾತೀತ ಶಕ್ತಿ ಒಂದು ಮಾಡಲು ಜೆಡಿಎಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಳಿಕ ಸೀತಾರಾಮ ಕಲ್ಯಾಣ ಚಿತ್ರದ ನಿನ್ನ ರಾಜ ನಾನು, ನನ್ನ ರಾಣಿ ನೀನು ಗೀತೆಗೆ ಧನಿಯಾಗಿ ನಿಖಿಲ್ ನೃತ್ಯ ಮಾಡಿ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News