ಲೋಕಸಭೆ ಚುನಾವಣೆಯಲ್ಲಿ ಆರ್‌ಪಿಐ-ಎಐಎಂಐಎಂ ಮೈತ್ರಿ: ಪ್ರಕಾಶ್ ಅಂಬೇಡ್ಕರ್
ಬೆಳಗಾವಿ, ಮಾ. 9: ಲೋಕಸಭೆ ಚುನಾವಣೆಯಲ್ಲಿ ಭಾರತೀಯ ರಿಪಬ್ಲಿಕ್ ಪಾರ್ಟಿ ಹಾಗೂ ಎಐಎಂಐಎಂ ಮೈತ್ರಿ ಮಾಡಿಕೊಳ್ಳಲಿದ್ದು, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೇಲ್ವರ್ಗದವರಿಗೆ ಮಾತ್ರ ಮಣೆ ಹಾಕುತ್ತಿದ್ದು, ಕೆಳವರ್ಗದ ಜನರನ್ನು ಸಂಪೂರ್ಣ ಕಡೆಗಣಿಸಿದೆ. ಹೀಗಾಗಿ ಶೋಷಿತ ವರ್ಗದ ಅಭ್ಯರ್ಥಿಗಳಿಗೆ ವೇದಿಕೆ ಕಲ್ಪಿಸಲು ಪಕ್ಷವು ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದರು.
ಜಮ್ಮು-ಕಾಶ್ಮೀರ ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನ ಮೇಲೆ ನಡೆದ ವಾಯುಸೇನೆ ದಾಳಿಯಲ್ಲಿ ಸತ್ತ ಪಾಕಿಸ್ತಾನ ಉಗ್ರರ ಅಂಕಿ-ಸಂಖ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ವಾಯುಸೇನೆ ಪಾಕಿಸ್ತಾನದ ಎಷ್ಟು ಉಗ್ರರನ್ನು ಹತ್ಯೆಗೈದಿದೆ ಎಂದು ಪ್ರಶ್ನಿಸಿದರು.
ವಾಯುಸೇನೆ ದಾಳಿ ಹಾಗೂ ಗಡಿಯಲ್ಲಿನ ಗುಂಡಿನ ಚಕಮಕಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿಸಿದ್ದು, ಕೇಂದ್ರ ಸರಕಾರ ಮೌನ ಮುರಿಯಬೇಕು. ಅಲ್ಲದೆ, ಜನರಲ್ಲಿನ ಗೊಂದಲ ನಿವಾರಿಸಬೇಕು ಎಂದು ಇದೇ ವೇಳೆ ಕೋರಿದರು.