ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ತ್ವರಿತ ಗತಿಯಲ್ಲಿ ನ್ಯಾಯ ಸಿಗಲಿ: ನ್ಯಾ.ರವಿ ಮಳಿಮಠ್
ಬೆಳಗಾವಿ, ಮಾ.9: ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸುವಂತಹ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರವಿ ಮಳಿಮಠ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ನ್ಯಾಯಾಧೀಕರಣ ಮಂಡಳಿ, ಲೋಕೋಪಯೋಗಿ ಇಲಾಖೆ ಮತ್ತು ಬಾರ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಕೆಎಲ್‌ಇ ಜೀರಗೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೋರ್ಟ್ ಕ್ಯಾಂಟೀನ್ ಕಟ್ಟಡ, ಲಾ ಚೇಂಬರ್ಸ್ ಕಟ್ಟಡ ಹಾಗೂ ನ್ಯಾಯಾಲಯ ಕಟ್ಟಡದ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಕೋರ್ಟ್ ಕಟ್ಟಡದ ಅಭಿವೃದ್ಧಿಗಾಗಿ ಕೋಟ್ಯಂತರ ರೂ.ಖರ್ಚು ಮಾಡುತ್ತಿದೆ. ಸಾರ್ವಜನಿಕರಿಗೆ ಉತ್ತಮ ಸೌಕರ್ಯ ಒದಗಿಸಲಿ ಎಂಬುವುದು ಸರಕಾರದ ಆಶಯವಾಗಿದೆ. ಸತ್ಯ ಹಾಗೂ ವಿಶ್ವಾಸಾರ್ಹ ತೀರ್ಪು ಹೊರಡಿಸುವುದು ನ್ಯಾಯಾಲಯಗಳ ಧ್ಯೇಯವಾಗಬೇಕು ಎಂದು ಅವರು ಕರೆ ನೀಡಿದರು.
ಸಂಸದ ಸುರೇಶ್ ಅಂಗಡಿ ಮಾತನಾಡಿ, ಎಲ್ಲ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ನ್ಯಾಯದಲ್ಲಿಯೂ ಕೂಡಾ ಇತ್ತೀಚಿಗೆ ತಂತ್ರಜ್ಞಾನವನ್ನು ಬಳಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಶಿಸ್ತು ಮತ್ತು ಸಮಯದ ಪಾಲನೆ ಮಾಡುವುದು ವಕೀಲ ವೃತ್ತಿಯಲ್ಲಿ ಮುಖ್ಯವಾಗಿದೆ. ಬೆಳಗಾವಿ ಬಾರ್ ಅಸೋಸಿಯೇಷನ್‌ನ ಸದಸ್ಯರಲ್ಲಿರುವಂತಹ ಶಿಸ್ತನ್ನು ನಾನು ಬೇರೆ ಯಾವುದೇ ಬಾರ್ ಅಸೋಸಿಯೇಷನ್‌ನಲ್ಲಿ ನೋಡಿಲ್ಲ, ಹಾಗೂ ಈ ಬಾರ್ ಅಸೋಸಿಯೇಷನ್‌ನಲ್ಲಿ ನಾನು ಸದಸ್ಯನಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ ಬೆನಕೆ, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಚಾಪುರೆ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ್ ಸಿಂಗ್, ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಕೆ.ಬಿ.ನಾಯ್ಕ, ಸದಸ್ಯರಾದ ಎ.ಎ.ಮಗದುಮ್, ವಿನಯ ಮಂಗಲೆಕರ, ಕಲ್ಮೇಶ ಟಿ.ಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.