ಕಳವು ಆರೋಪಿ ಬಂಧನ: 1.86 ಲಕ್ಷ ಮೌಲ್ಯದ ಚಿನ್ನಾಭರಣ ವಶ

Update: 2019-03-09 18:17 GMT

ಮೈಸೂರು,ಮಾ.9: ಚಿನ್ನದ ಅಂಗಡಿಯಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ 1,86,000 ರೂ. ಮೌಲ್ಯದ ಒಟ್ಟು 60 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವೀರುಪಾಕ್ಷಪುರ ಹೋಬಳಿ ಸಿಂಗರಾಜಪುರ ಗ್ರಾಮದ ಶಿವಮಾದು (42) ಬಂಧಿತ ಆರೋಪಿ.

ಗಾಂಧಿವೃತ್ತದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಅಶೋಕ ರಸ್ತೆಯಲ್ಲಿರುವ ಒಂದು ಚಿನ್ನದ ಅಂಗಡಿಯಲ್ಲಿ 40 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ಮಾಡಿದಾಗ 7 ವರ್ಷಗಳ ಹಿಂದೆ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ 20 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯನ್ನು ಡಿಸಿಪಿ ಮುತ್ತುರಾಜ್, ದೇವರಾಜ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಕೈಗೊಂಡಿದ್ದು, ಲಷ್ಕರ್ ಪೊಲೀಸ್ ಠಾಣೆಯ ಪಿಐ ಎನ್.ಮುನಿಯಪ್ಪ ಅವರ ಉಸ್ತುವಾರಿಯಲ್ಲಿ ಪಿಎಸ್‍ಐ ಪೂಜಾ, ಪ್ರೊಬೇಷನರಿ ಪಿಎಸ್‍ಐ ಗೌತಮ್ ಗೌಡ, ಎಎಸ್‍ಐ ಎನ್.ಮಹದೇವಪ್ಪ, ಸಿಬ್ಬಂದಿಗಳಾದ ಪರಶಿವಮೂರ್ತಿ, ಲೋಕೇಶ, ಪ್ರದೀಪ, ಪಿಸಿಗಳಾದ ಪ್ರತೀಪ, ಮಂಜುನಾಥ್ ಭಾಗಿಯಾಗಿದ್ದರು. ಇವರನ್ನು ನಗರ ಪೊಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣ ಅವರು ಪ್ರಶಂಶಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News