ಎಸೆಸೆಲ್ಸಿ ಪರೀಕ್ಷೆ: ಸಿಬಿಎಸ್‌ಸಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು
ಬೆಂಗಳೂರು, ಮಾ.10: ಶನಿವಾರ ನಡೆದ ಎಸೆಸೆಲ್ಸಿ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಲ್ಲಿಯೇ ಇಲ್ಲದ ವಿಷಯಗಳ 23 ಅಂಕಗಳ ಪ್ರಶ್ನೆಗಳನ್ನು ನೀಡುವ ಮೂಲಕ ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಸಿ) ಎಡವಟ್ಟು ಮಾಡಿದೆ. ಸಿಬಿಎಸ್‌ಸಿಯ ಎಡವಟ್ಟಿನಿಂದಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಇದೀಗ ಗೊಂದಲಕ್ಕೀಡಾಗಿದ್ದಾರೆ, ಅಲ್ಲದೆ, ಮುಂದೆ ಏನು ಎಂದು ಚಿಂತೆಗೀಡಾಗಿದ್ದಾರೆ.
ಫೆಬ್ರವರಿಯಲ್ಲಿ ಆರಂಭವಾಗಿದ್ದ ಸಿಬಿಎಸ್‌ಸಿ ಎಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಶನಿವಾರ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಆರಂಭದ ನಂತರ ಮೊದಲ 15 ನಿಮಿಷಗಳಲ್ಲಿ ಪ್ರಶ್ನೆ ಪತ್ರಿಕೆ ಓದಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಗೊಂದಲವಾಗಿದೆ.
2017-18 ನೆ ಸಾಲಿನ ಸಿಬಿಎಸ್‌ಸಿ ಎಸೆಸ್ಸೆಲ್ಸಿ ಸಿರಿಗನ್ನಡ ಪುಸ್ತಕವನ್ನು ಪರಿಷ್ಕರಣೆ ಮಾಡಿ ಕೆಲವು ಗದ್ಯ, ಪದ್ಯ ಹಾಗೂ ಪೂರಕ ಪಠ್ಯಗಳನ್ನು ಬದಲಾವಣೆ ಮಾಡಲಾಗಿತ್ತು. ಆದರೆ, ಎರಡು ವರ್ಷ ಕಳೆದ, 2015-16 ನೆ ಸಾಲಿನ ಪರಿಷ್ಕರಣೆಯಾಗದ ಪಠ್ಯಕ್ಕೆ ಸಂಬಂಧಿಸಿದ 23 ಅಂಕಗಳ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಪೋಷಕರ ಆಕ್ರೋಶ: ಸಿಬಿಎಸ್‌ಸಿಯಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳ ಸಂಖ್ಯೆ ತೀರಾ ಕಡಿಮೆ. ಅಂತಹದರಲ್ಲಿಯೂ ತಪ್ಪು ತಪ್ಪು ಪ್ರಶ್ನೆಗಳನ್ನು ಕೇಳುವ ಮೂಲಕ ಕನ್ನಡದ ಮೇಲಿನ ಆಸಕ್ತಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದ್ದಾರೆ. ಕನ್ನಡಿಗರೇ ಕನ್ನಡಕ್ಕೆ ಈ ರೀತಿಯ ಅವಮಾನ ಮಾಡುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಶಾಲೆಗಳಿಗೆ ನೀಡಿರುವ ಪಠ್ಯವನ್ನೇ ಭೋದನೆ ಮಾಡಿದ್ದೇವೆ. ಆದರೆ, ಪರೀಕ್ಷೆಯಲ್ಲಿ ಹಳೆಯ ಪಠ್ಯದ ಪ್ರಶ್ನೆಗಳನ್ನು ಕೇಳಿರುವುದು ಸರಿಯಲ್ಲ. ಅಲ್ಲದೆ, ಇದಕ್ಕೆ ಮಂಡಳಿಯೇ ಹೊಣೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ನ್ಯಾಯ ಒದಗಿಸಬೇಕು ಎಂದು ಸಿಬಿಎಸ್‌ಸಿ ಶಾಲಾ ಶಿಕ್ಷಕರು ಆಗ್ರಹಿಸಿದ್ದಾರೆ.