ಕ್ಯಾಂಟರ್ ಪಲ್ಟಿ: ಕಾರ್ಮಿಕ ಸಾವು - ಏಳು ಮಂದಿಗೆ ಗಾಯ
Update: 2019-03-10 19:43 IST
ಶಿವಮೊಗ್ಗ, ಮಾ. 10: ಚಾಲಕನ ನಿಯಂತ್ರಣ ಕಳೆದುಕೊಂಡ ಕ್ಯಾಂಟರ್ ಲಾರಿಯೊಂದು ಪಲ್ಟಿಯಾಗಿ ಬಿದ್ದ ಪರಿಣಾಮ ಓರ್ವ ಕೂಲಿಕಾರ್ಮಿಕ ಮೃತಪಟ್ಟು, ಸುಮಾರು ಏಳು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಬಳಿ ನಡೆದಿದೆ.
ಹಾವೇರಿ ಜಿಲ್ಲೆ ಕಳಕೊಂಡದ ನಿವಾಸಿ ಆಂಜನೇಯ (20) ಮೃತಪಟ್ಟವರೆಂದು ಗುರುತಿಸಲಾಗಿದೆ. ಪ್ರವೀಣ್, ಮಂಜು, ಹುಚ್ಚಪ್ಪ, ಹನುಮಂತಪ್ಪ, ನಾಗರಾಜ, ಮಲ್ಲೇಶ ಹಾಗೂ ರಾಘವೇಂದ್ರ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 15 ಜನರಿದ್ದ ಕೂಲಿ ಕಾರ್ಮಿಕರ ತಂಡ ಕಳಕೊಂಡ ಗ್ರಾಮದಿಂದ ಕ್ಯಾಂಟರ್ ಲಾರಿಯಲ್ಲಿ ಹೊಸನಗರ ತಾಲೂಕಿನಲ್ಲಿ ನಡೆಯುತ್ತಿದ್ದ ಕೆಲಸವೊಂದರಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.