ಮಂಗನ ಕಾಯಿಲೆ ಬಗ್ಗೆ ಯಾವುದೇ ಕಾರಣಕ್ಕೂ ಆತಂಕ ಬೇಡ: ಸಿಎಂ ಕುಮಾರಸ್ವಾಮಿ
ಬೆಂಗಳೂರು, ಮಾ. 10: ಶಿವಮೊಗ್ಗ ಸೇರಿದಂತೆ ಮಲೆನಾಡಿನ ವಿವಿಧೆಡೆ ಮಂಗನ ಕಾಯಿಲೆ ಹರಡುತ್ತಿದ್ದು, ಸಾರ್ವಜನಿಕರು ಕಾಯಿಲೆಯ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಭಯ ನೀಡಿದ್ದಾರೆ.
ರವಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಿಂದ ಮೇ ವರೆಗೂ ಆ ಕೀಟಗಳು ಕೋತಿ, ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ವೈರಸ್ ಹರಡುತ್ತದೆ. ಮಲೆನಾಡಿನ ಭಾಗದಲ್ಲಿ ಆ ಕೀಟಗಳು ಹೆಚ್ಚಾಗಿವೆ. ಔಷಧಿಯ ಕೊರತೆ ಇಲ್ಲ. ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಂಸ್ಥೆ ವ್ಯಾಕ್ಸಿನೇಷನ್ ತಯಾರು ಮಾಡುತ್ತದೆ. ಈಗಾಗಲೇ 1.20 ಲಕ್ಷ ವ್ಯಾಕ್ಸಿನೇಷನ್ ಕೊಡಲಾಗಿದೆ. ರೋಗಕ್ಕೆ ತುತ್ತಾದವರು 15 ದಿನಕ್ಕೊಮ್ಮೆ ಒಂದು ತಿಂಗಳಲ್ಲಿ ಎರಡು ಸಲ ತೆಗೆದುಕೊಳ್ಳುತ್ತಾರೆ. ನಂತರ ಬೂಸ್ಟರ್ ಬರುತ್ತದೆ. ಅದನ್ನು ತೆಗೆದುಕೊಂಡರೆ ರೋಗಿ ಗುಣಮುಖರಾಗಿತ್ತಾರೆ ಎಂದು ಹೇಳಿದರು.
1762 ಶಂಕಿತ ಪ್ರಕರಣಗಳನ್ನು ಪರೀಕ್ಷೆಗೊಳಪಡಿಸಿದಾಗ 250 ಪ್ರಕರಣಗಳಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ಮಂಗನ ಕಾಯಿಲೆಯಿಂದ 10 ಜನರು ಮೃತಪಟ್ಟಿದ್ದಾರೆ. ಸಾಗರದಲ್ಲಿ 6, ತೀರ್ಥಹಳ್ಳಿ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಕುಮಾರಸ್ವಾಮಿ ವಿವರ ನೀಡಿದರು.