ಸ್ವಚ್ಛ ನಗರಿಗಳ ಸಾಲಿನಲ್ಲಿ ಮೈಸೂರಿಗೆ 3ನೇ ಸ್ಥಾನ: ಪೌರಕಾರ್ಮಿಕರಿಗೆ ಸನ್ಮಾನ
ಮೈಸೂರು,ಮಾ.10: ದೇಶದ ಸ್ವಚ್ಛ ನಗರಿಗಳ ಸಾಲಿನಲ್ಲಿ ಮೈಸೂರಿಗೆ ಮೂರನೇ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸಿದರು.
ನಗರದ ರಾಜೇಂದ್ರ ಕಲಾಮಂದಿರಲದಲ್ಲಿ ರವಿವಾರ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರಕಾರ್ಮಿಕರಿಗೆ ಶಾಲು ಹೊದಿಸಿ, ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಅವರು, ನಮ್ಮ ಅರಮನೆ ನಗರಿ ಮೈಸೂರು ಸ್ವಚ್ಛತೆಯಲ್ಲಿ ಮೂರನೇ ಶ್ರೇಯಾಂಕದ ಪುರಸ್ಕಾರ ಪಡೆಯುವಲ್ಲಿ ಪೌರಕಾರ್ಮಿಕರ ಶ್ರಮವೇ ಪ್ರಮುಖ ಕಾರಣ. ಮೈಸೂರನ್ನು ಇಡೀ ದೇಶ ಮತ್ತು ವಿಶ್ವವೇ ನೋಡುವಂತೆ ಮಾಡಿದವರು ಪೌರಕಾರ್ಮಿಕರು. ಅವರು ಪ್ರತಿ ದಿನ ಮೈಸೂರನ್ನು ಸ್ವಚ್ಛಗೊಳಿಸದೇ ಇದ್ದರೆ ಯಾವಸ್ಥಿತಿಯಲ್ಲಿ ಇರುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಪೌರಕಾರ್ಮಿಕರ ಬದುಕನ್ನು ಮತ್ತಷ್ಟು ಉತ್ತಮಗೊಳಿಸಲು ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಇವರ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೇರಿದಂತೆ ನಗರಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.