ಒಂದೇ ಹೊಟೇಲ್‌ನಲ್ಲಿ 3 ಪಕ್ಷಗಳ ಮುಖಂಡರ ಸಮಾಗಮ: ಕುತೂಹಲ ಸೃಷ್ಟಿಸಿದ ರಾಜ್ಯ ರಾಜಕಾರಣ

Update: 2019-03-11 14:06 GMT

ಬೆಂಗಳೂರು, ಮಾ.11: ಲೋಕಸಭೆ ಚುನಾವಣಾ ಘೋಷಣೆ ಬೆನ್ನಲ್ಲೆ ಮಂಡ್ಯ ಕ್ಷೇತ್ರದ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ, ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ಬಾಲಕೃಷ್ಣ ಹಾಗೂ ಬಿಜೆಪಿ ಶಾಸಕರಾದ ಡಾ.ಅಶ್ವಥ್ ನಾರಾಯಣ್, ರಾಜುಗೌಡ ಒಟ್ಟಿಗೆ ಸೇರಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರ ಇಲ್ಲಿನ ಶಿವಾನಂದ ವೃತ್ತದ ಬಳಿಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಊಟ ಮಾಡಿದ್ದಾರೆಂದು ಹೇಳಲಾಗಿದೆ. ಆದರೆ, ‘ಆಕಸ್ಮಿಕವಾಗಿ ಹೊಟೇಲ್‌ಗೆ ಬಂದಾಗ ಪರಸ್ಪರ ಭೇಟಿ ಮಾಡಿದ್ದೇವೆ, ನಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಕಾರ್ ಡೋರ್ ತೆಗೆಯಲು ಸಿದ್ಧ: ನಾನು ಕೇವಲ ನಟ ಮಾತ್ರ. ಸಂಸದನಾಗಿ ನಟನೆ ಮಾಡಿದ್ದೇನೆ, ಇನ್ನು ಮುಂದೆ ಯಾವ ಪಾತ್ರ ಕೊಟ್ಟರೂ ಮಾಡುತ್ತೇನೆ. ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾರ್ ಡೋರ್ ತೆರೆಯುವ ಕೆಲಸಕ್ಕೂ ನಾನು ಸಿದ್ಧ ಎಂದು ಸಂಸದ ಶಿವರಾಮೇಗೌಡ ಹೇಳಿದರು.

ನಮ್ಮ ನಾಯಕರು ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ. ಅವರು ಹೇಳಿದಂತೆ ನಾನು ಕೇಳುವೆ. ಊಟ ಮಾಡಲೆಂದು ಹೊಟೇಲ್‌ಗೆ ಬಂದಿದ್ದೆ. ಈ ವೇಳೆ ಅದೇ ಹೊಟೇಲ್‌ಗೆ ಊಟಕ್ಕೆ ಬಂದಿದ್ದ ಚೆಲುವರಾಯಸ್ವಾಮಿ, ಬಾಲಕೃಷ್ಣ, ಬಿಜೆಪಿಯ ಶಾಸಕರಾದ ಅಶ್ವಥ್ ನಾರಾಯಣ್, ರಾಜುಗೌಡ ಭೇಟಿಯಾಗಿದ್ದು ಉಭಯ ಕುಶಲೋಪರಿ ವಿಚಾರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ನಿಖಿಲ್ ಕುಮಾರಸ್ವಾಮಿ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಲಿದ್ದು, ಅವರು ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ಸುಮಲತಾ ಅಂಬರೀಶ್ ಅವರ ಬಗ್ಗೆ ನಮಗೆ ಗೊತ್ತಿಲ್ಲ. ಆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಹಾಲಿ ಸಂಸದನಾಗಿದ್ದು, ಅಗತ್ಯ ಬಿದ್ದರೆ ಕಾಂಗ್ರೆಸ್ ಮುಖಂಡರ ಜತೆ ಚರ್ಚೆಗೂ ನಾನು ಸಿದ್ಧ ಎಂದು ಹೇಳಿದರು.

‘ನಾನು ಹೊಟೇಲ್ ಗೆ ಬರುವುದು ಸಾಮಾನ್ಯ. ಇಲ್ಲಿಗೆ ಬಂದಾಗ ಬಿಜೆಪಿ ನಾಯಕರು ಇದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಯಾವುದೇ ಸಭೆಯನ್ನು ಹೊಟೇಲ್ ನಲ್ಲಿ ಮಾಡಿಲ್ಲ. ಬಿಜೆಪಿಯಲ್ಲೂ ನನಗೆ ಸ್ನೇಹಿತರು ಇದ್ದಾರೆ. ನಾನು ಯಾರಿಗೂ ವೈರಿಯಲ್ಲ’

-ಎನ್.ಚೆಲುವರಾಯಸ್ವಾಮಿ, ಮಂಡ್ಯ ಕಾಂಗ್ರೆಸ್ ಮುಖಂಡ

ಕಾಂಗ್ರೆಸ್-ಜೆಡಿಎಸ್ ಮುಖಂಡರ ಭೇಟಿಯಲ್ಲಿ ವಿಶೇಷತೆ ಇಲ್ಲ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಸುಮಲತಾ ಬೆಂಬಲಿಸುವ ಬಗ್ಗೆಯೂ ಮಾತನಾಡಿಲ್ಲ. ಕಲಬುರ್ಗಿಯಲ್ಲಿ ಉಮೇಶ್ ಜಾಧವ್ ಪ್ರಬಲ ಅಭ್ಯರ್ಥಿ. ಅವರು ಗೆಲ್ಲುವ ವಿಶ್ವಾಸವಿದೆ’

-ರಾಜುಗೌಡ, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News