ಮದುವೆ ಆಮಂತ್ರಣ ಪತ್ರಿಕೆಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ !
ಯಾದಗಿರಿ, ಮಾ. 11: ಮದುವೆ ಆಮಂತ್ರಣ ಪತ್ರಿಕೆ ಮೂಲಕ ಬಿಜೆಪಿ ಗೆಲ್ಲಿಸಲು ಕರೆಯೋಲೆ ನೀಡಲು ಮುಂದಾಗಿದ್ದ ಕಾರ್ಯಕರ್ತನೊಬ್ಬನ ವಿವಾಹಕ್ಕೆ ಲೋಕಸಭೆ ಚುನಾವಣಾ ನೀತಿ ಸಂಹಿತೆ ಬಿಸಿತಟ್ಟಿದ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ನಡೆದಿದೆ.
ಯಾದಗಿರಿಯ ಬಿಜೆಪಿ ಕಾರ್ಯಕರ್ತ ಬಸವರಾಜ ‘ಮೋದಿ ಗೆಲ್ಲಿಸಿ ದೇಶ ಉಳಿಸಿ-ಮತ್ತೊಮ್ಮೆ ಮೋದಿ’ ಎಂದು ಬರೆಸಿ, ಮೋದಿ ಸಹಿತ ಹಲವು ನಾಯಕರ ಭಾವಚಿತ್ರಗಳೊಂದಿಗೆ ಮಡುವೆ ಆಮಂತ್ರಣವನ್ನು ಮುದ್ರಿಸಿದ್ದರು. ಆದರೆ, ಮಾ.10ರ ಮಧ್ಯರಾತ್ರಿಯಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಮದುವೆ ಆಮಂತ್ರಣ ಪತ್ರವನ್ನು ಹಂಚಿಕೆ ಮಾಡದಿರಲು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಹದಿನೈದು ದಿನಗಳಿಂದ ಮದುವೆ ಕರೆಯೋಲೆ ಹಂಚಿಕೆ ಮಾಡುತ್ತಿದ್ದ ಮಧುಮಗ ಬಸವರಾಜು ಲಗ್ನ ಪತ್ರಿಕೆಗಳನ್ನು ಚುನಾವಣಾ ಆಯೋಗದ ಸುರ್ಪದಿಗೆ ಒಪ್ಪಿಸಿದ್ದಾರೆ.
ಮಾ.24ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬಸವರಾಜ ಹಾಗೂ ಸಹೋದರ ಶರಣಬಸವ ಮದುವೆಗಳು ನಿಶ್ಚಯವಾಗಿದ್ದು, ಬಿಜೆಪಿ ಕಾರ್ಯಕರ್ತರೂ ಆಗಿರುವ ಬಸವರಾಜ ಮದುವೆ ಆಮಂತ್ರಣ ಪತ್ರಿಕೆ ಮೂಲಕ ಪಕ್ಷದ ಪ್ರಚಾರಕ್ಕೆ ಮುಂದಾಗಿದ್ದರು.
ಇದೀಗ ಚುನಾವಣಾ ಆಯೋಗದ ಅಧಿಕಾರಿಗಳು ಮದುವೆ ಆಮಂತ್ರಣ ಪತ್ರಿಕೆಗಳನ್ನು ಜಪ್ತಿ ಮಾಡಿದೆ. ಲಗ್ನ ಪತ್ರಿಕೆ ಮುದ್ರಿಸಿದ ಮುದ್ರಣಾಲಯಕ್ಕೆ ಆಮಂತ್ರಣ ಪತ್ರಿಕೆಯನ್ನು ಎಷ್ಟು ಮುದ್ರಣ ಮಾಡಲಾಗಿತ್ತು ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆಂದು ತಿಳಿದು ಬಂದಿದೆ.