ಮಾ.19 ರಂದು ಚುನಾವಣಾ ಅಧಿಸೂಚನೆ ಪ್ರಕಟ: ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್

Update: 2019-03-11 15:08 GMT

ಮೈಸೂರು,ಮಾ.11: ಭಾರತ ಚುನಾವಣಾ ಆಯೋಗವು ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಮೈಸೂರಿನಲ್ಲಿ ಚುನಾವಣಾ ಅಧಿಸೂಚನೆಯನ್ನು ಮಾರ್ಚ್ 19ರಂದು ಹೊರಡಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ನಾಮಪತ್ರಗಳನ್ನು ಮಾರ್ಚ್ 27ರಂದು ಪರಿಶೀಲಿಸಲಾಗುವುದು. ನಾಮಪತ್ರ ಹಿಂಪಡೆಯಲು ಮಾರ್ಚ್ 29ಕೊನೆಯ ದಿನ. ಮೈಸೂರಿನಲ್ಲಿ ಏಪ್ರೀಲ್ 18ರಂದು ಚುನಾವಣೆ ನಡೆಯಲಿದೆ. ಮತದಾನದ ಎಣಿಕೆ ಮೇ.23, ಚುನಾವಣೆಯ ಮುಕ್ತಾಯದ ದಿನಾಂಕ ಮೇ.27 ಎಂದು ತಿಳಿಸಿದರು.  

ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 208 ಮಡಿಕೇರಿ, 209 ವಿರಾಜಪೇಟೆ, 210 ಪಿರಿಯಾಪಟ್ಟಣ, 212 ಹುಣಸೂರು, 215 ಚಾಮುಂಡೇಶ್ವರಿ, 216 ಕೃಷ್ಣರಾಜ, 217 ಚಾಮರಾಜ, 218 ನರಸಿಂಹರಾಜ ಕ್ಷೇತ್ರ, 211 ಕೆ.ಆರ್.ನಗರ, 213 ಹೆಚ್.ಡಿ.ಕೋಟೆ, 214ನಂಜನಗೂಡು, 219ವರುಣ, 220ಟಿ.ನರಸೀಪುರ ಕ್ಷೇತ್ರಗಳು ಬರಲಿವೆ. ಪಿರಿಯಾಪಟ್ಟಣದಲ್ಲಿ ಒಟ್ಟು 1,81,160, ಕೆ.ಆರ್.ನಗರ 20,42,297, ಹುಣಸೂರು 2,24,061, ಹೆಚ್.ಡಿ.ಕೋಟೆ 2,12,254, ನಂಜನಗೂಡು 2,08,003, ಚಾಮುಂಡೇಶ್ವರಿ 2,95,990, ಕೃಷ್ಣರಾಜ 2,38,251, ಚಾಮರಾಜ 2,27,082, ನರಸಿಂಹರಾಜ 2,56,913, ವರುಣಾ 2,20,216 1ಟಿ.ನರಸೀಪುರ 1,96,875ಮತದಾರರಿದ್ದಾರೆ ಎಂದು ತಿಳಿಸಿದರು. 

ಪಿರಿಯಾಪಟ್ಟಣದಲ್ಲಿ ಒಟ್ಟು 235, ಕೆ.ಆರ್.ನಗರದಲ್ಲಿ 252, ಹುಣಸೂರಿನಲ್ಲಿ 274, ಹೆಚ್.ಡಿ.ಕೋಟೆಯಲ್ಲಿ 284, ನಂಜನಗೂಡಿನಲ್ಲಿ 251, ಚಾಮುಂಡೇಶ್ವರಿಯಲ್ಲಿ 338, ಕೃಷ್ಣರಾಜದಲ್ಲಿ 270, ಚಾಮರಾಜದಲ್ಲಿ 245, ನರಸಿಂಹರಾಜದಲ್ಲಿ 282, ವರುಣಾದಲ್ಲಿ 263, ಟಿ.ನರಸೀಪುರದಲ್ಲಿ 227 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ರ್ಯಾಂಪ್ ವ್ಯವಸ್ಥೆಯನ್ನು ಒದಗಿಸಲು ಕ್ರಮವಹಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ಬ್ಯಾಲೆಟ್ ಯೂನಿಟ್ ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಸರಬರಾಜು ಮಾಡಲಾಗುವುದು ಎಂದರು. 

ವೇರ್ ಹೌಸ್ ನ ಸುರಕ್ಷತೆಯ ದೃಷ್ಟಿಯಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಿಸಿಟಿವಿ ಕಣ್ಗಾವಲಿದೆ. ಪ್ರತಿಮತಗಟ್ಟೆಗೂ ಅಗತ್ಯ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ಅಬ್ ಸರ್ವರ್ ಆಗಿ ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು, ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ತಂಡಗಳ ರಚನೆ ಮಾಡಿ ತರಬೇತಿ ಸಹ ನೀಡಲಾಗಿದೆ. ವೋಟರ್ ಮತದಾನ ಸೌಲಭ್ಯ ಕೇಂದ್ರ ಡಿಸ್ಟ್ರಿಕ್ಟ್ ಕಾಂಟೆಕ್ಟ್ ಸೆಂಟರ್ 1950 ಹೆಲ್ಪ ಲೈನ್ 24*7ಕಾರ್ಯನಿರ್ವಹಿಸಲಿದೆ. ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಚಾರಕ್ಕೂ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಪೇಯ್ಡ್ ನ್ಯೂಸ್ ಕುರಿತು ಚುನಾವಣಾ ನೀತಿ ಸಂಹಿತೆ ತಂಡ ನಿಗಾವಹಿಸಲಿದೆ ಎಂದು ತಿಳಿಸಿದರು.

ರೌಡಿ ಶೀಟರ್ ಗಳಿಗೆ  ಈಗಾಗಲೇ ಕಾನೂ ಭಂಗ ತರದಂತೆ ಎಚ್ಚರಿಕೆ ನೀಡಲಾಗಿದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವವರು, ಪರವಾನಗಿ ಪಡೆದು ಶಸ್ತ್ರಾಸ್ತ್ರ ಹೊಂದಿರುವವರಿಗೂ ಅದನ್ನು ಪೊಲೀಸ್ ಸುಪರ್ದಿಗೆ ಒಪ್ಪಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ ಸಾಧನೆ ಕುರಿತ ಯಾವುದೇ ಜಾಹೀರಾತು ಪತ್ರಗಳು ಕಣ್ಣಿಗೆ ಕಾಣಿಸಬಾರದು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸುವ ಜಾಹೀರಾತು ಫಲಕಗಳನ್ನು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಅಪರ ಜಿಲ್ಲಾಧಿಕಾರಿ ಅನುರಾಧ, ಮನಪಾ ಆಯುಕ್ತೆ ಶಿಲ್ಪನಾಗ್, ಜಿ.ಪಂ ಸಿಇಒ ಕೆ.ಜ್ಯೋತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ ಸೇರಿದಂತೆ ಹಲವರು ಅಧಿಕಾರಿಗಳು ಉಪಸ್ಥಿತರಿದ್ದರು.  

ಸರ್ಕಾರಿ ಕಾರುಗಳನ್ನು ವಶಕ್ಕೆ ಪಡೆದ ಜಿಲ್ಲಾಡಳಿತ
ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗಿದ್ದು ನಿನ್ನೆಯಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಭಾರತ ಚುನಾವಣಾ ಆಯೋಗದ ಆದೇಶದ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸರ್ಕಾರಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ಸರ್ಕಾರಿ ಕಾರುಗಳಾದ ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ,ಮೈಸೂರು ಮೃಗಾಲಯ ಪ್ರಾಧಿಕಾರ, ಕಾಡಾ ಆಡಳಿತಾಧಿಕಾರಿ, ವಸ್ತು ಪ್ರದರ್ಶನ ಪ್ರಾಧಿಕಾರ,ಎಂ.ಡಿ.ಸಿ.ಸಿ ಬ್ಯಾಂಕ್, ಮೈಸೂರು ಚಾಮರಾಜನಗರ ಹಾಲು ಒಕ್ಕೂಟ, ಕೆ.ಎಸ್.ಐ.ಸಿ, ಬಣ್ಣ ಮತ್ತು ಅರಗು ಕಾರ್ಖಾನೆ, ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾ ಮಂಡಳಿ, ಎ.ಪಿ.ಎಂ.ಸಿ ಗೆ ನೀಡಿದ್ದ ಸರ್ಕಾರಿ ಕಾರುಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರಿಂದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಕಾರುಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸಚಿವರು, ಮಂಡಳಿ ಅಧ್ಯಕ್ಷರು ಖಾಸಗಿ ಕಾರಿನಲ್ಲಿ ತೆರಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News