ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 15,94,703 ಮತದಾರರು: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್

Update: 2019-03-11 15:18 GMT

ತುಮಕೂರು, ಮಾ.11: ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾ.19 ರಂದು ಅಧಿಸೂಚನೆ ಹೊರಡಿಸಲಿದ್ದು ಎ.18 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯು ಆದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.

ಜಿಲ್ಲೆಯು 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿವೆ. 8 ವಿಧಾನಸಭಾ ಕ್ಷೇತ್ರಗಳನ್ನು ತುಮಕೂರು ಲೋಕಸಭಾ ಕ್ಷೇತ್ರ ಒಳಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಒಟ್ಟು 1907 ಮತಗಟ್ಟೆಗಳಿರಲಿವೆ. ಈ ಬಾರಿ 15,94,703 ಮತದಾರರು ಹಕ್ಕು ಹೊಂದಿದ್ದು ಇವರಲ್ಲಿ 7,97,512 ಪುರುಷರು, 7,97,191 ಮಹಿಳೆಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ತುಮಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿಹೆಚ್ಚು 2,50,179 ಮತದಾರರಿದ್ದರೆ, ತುರುವೇಕೆರೆ ಕ್ಷೇತ್ರದಲ್ಲಿ ಅತಿಕಡಿಮೆ 1,77,988 ಮತದಾರರಿದ್ದಾರೆ ಎಂದರು. 

ಜಿಲ್ಲೆಯಲ್ಲಿ ಒಟ್ಟು 2684 ಮತಗಟ್ಟೆ ಸ್ಥಾಪಿಸಲಾಗಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ 1907, ಶಿರಾ, ಪಾವಗಡ ವಿಧಾನಸಭಾ ಕ್ಷೇತ್ರಗಳನ್ನೊಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 513, ಕುಣಿಗಲ್ ಕ್ಷೇತ್ರ ಒಳಗೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  264 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮತ ದೃಢೀಕರಿಸಿಕೊಳ್ಳಲು ವಿವಿಪ್ಯಾಟ್ ಅಳವಡಿಸಲಾಗಿದೆ ಎಂದು ರಾಕೇಶ್ ಕುಮಾರ್ ತಿಳಿಸಿದರು.

28351 ಅಂಗವಿಕಲ ಮತದಾರರು: ಜಿಲ್ಲೆಯಲ್ಲಿ ಒಟ್ಟು 28351 ಅಂಗವಿಕಲ ಮತದಾರರಿದ್ದು, ಇವರ ಅನುಕೂಲಕ್ಕಾಗಿ ವ್ಹೀಲ್‍ಚೇರ್ ವ್ಯವಸ್ಥೆ, ಅಂಧರಿಗೆ ಬ್ರೈಲ್ ಲಿಪಿ, ಭೂತಗನ್ನಡಿ ಹಾಗೂ ಅಗತ್ಯವಿದ್ದರೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 680 ಜನರಿಗೆ ವ್ಹೀಲ್ ಚೇರ್ ಅಗತ್ಯವಿದ್ದು ಮಗತಟ್ಟೆಯಲ್ಲಿ ಈ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ರಾಕೇಶ್ ಕುಮಾರ್ ಹೇಳಿದರು. 

ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಪಟ್ಟಿಯಲ್ಲಿ ಹೆಸರಿದ್ದರೆ ಆಯೋಗವು ನಿಗದಿಪಡಿಸಿರುವ 11 ದಾಖಲೆಗಳಲ್ಲಿ ಒಂದನ್ನು ತೋರಿಸಿ ಮತಚಲಾಯಿಸಬಹುದಾಗಿದೆ. ಈ ಬಾರಿ 38403 ಯುವ ಮತದಾರರ ನೋಂದಣಿ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 736 ಸೇವಾ ಮತದಾರರಿದ್ದಾರೆ. ಸೇವಾ ಮತದಾರರಿಗೆ ಇಟಿಪಿಬಿಎಸ್ ಮೂಲಕ ಅಂಚೆ ಮತಪತ್ರಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಸಹಾಯಕ ಚುನಾವಣಾ ಅಧಿಕಾರಿ, ಎಡಿಸಿ ಕೆ.ಚನ್ನಬಸಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News