ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆ ಸಾಧ್ಯತೆ

Update: 2019-03-11 16:16 GMT

ಬೆಂಗಳೂರು, ಮಾ.11: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ಗರಿಷ್ಠ ತಾಪಮಾನದಲ್ಲಿ ಸ್ವಲ್ಪಇಳಿಕೆಯಾಗಿದ್ದು, ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಏರಿಳಿತವಾಗಿದೆ. ಕೊಡಗು, ಮಲೆನಾಡು ಭಾಗದ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾದ ವರದಿಯಾಗಿದೆ. ಇಂದಿನಿಂದ ಮತ್ತೆ ಗರಿಷ್ಠ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ ಎಂದು ಹೇಳಿದರು.

ಮೇಲ್ಮೈ ಸುಳಿಗಾಳಿಯಿಂದಾಗಿ ಭಾಗಶಃ ಮೋಡ ಕವಿದ ವಾತಾವರಣ ದಕ್ಷಿಣ ಒಳನಾಡಿನಲ್ಲಿ ಕಂಡುಬಂದಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ ಭಾರೀ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದಾಗಿ ಕರಾವಳಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಸ್ವಲ್ಪ ಕಡಿಮೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ 2 ಡಿಗ್ರಿಯವರೆಗೂ ತಾಪಮಾನ ಹೆಚ್ಚಾಗಿದ್ದು, ಬಳ್ಳಾರಿ, ಕಲಬುರಗಿಯಲ್ಲಿ ತಾಪಮಾನ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿವೆ.

ದಾವಣಗೆರೆಯಲ್ಲಿ 39 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್‌‌ವರೆಗೂ ಗರಿಷ್ಠ ತಾಪಮಾನ ದಾಖಲಾಗಿದೆ. ಮೋಡ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ 35 ಡಿಗ್ರಿ ಸೆಲ್ಸಿಯಸ್‌‌ಗಿಂತ ಕಡಿಮೆ ದಾಖಲಾಗಿದ್ದು, ಇಂದಿನಿಂದ ಮತ್ತೆ ನಿರಂತರ ತಾಪಮಾನ ಏರಿಕೆಯಾಗುವ ಮೂಲಕ ಸರಾಸರಿಗಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಕನಿಷ್ಠ ತಾಪಮಾನದಲ್ಲೂ ಏರಿಕೆ ಕಂಡು ಬಂದಿದ್ದು, 22 ರಿಂದ 23ರಷ್ಟು ಡಿಗ್ರಿ ಸೆಲ್ಸಿಯಸ್‌‌ನಷ್ಟು ತಾಪಮಾನ ರಾತ್ರಿ ವೇಳೆ ಕಂಡು ಬರುತ್ತಿದೆ ಎಂದು ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಹೆಚ್ಚಿದ ತಾಪ; ಎಲ್ಲಿ, ಎಷ್ಟಿದೆ?

*ಮಡಿಕೇರಿ-29

*ಕಾರಾವಾರ-34

*ಬೆಂಗಳೂರು-34

*ಮೈಸೂರು-35

*ಚಿತ್ರದುರ್ಗ-36

*ಧಾರವಾಡ-36

*ಬೆಳಗಾವಿ-37

*ಗದಗ-37

*ವಿಜಯಪುರ-38

*ಕೊಪ್ಪಳ-39

*ಬಳ್ಳಾರಿ-39

*ರಾಯಚೂರು-40

*ಕಲಬುರ್ಗಿ-41

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News