ದಾವಣಗೆರೆ: ವರ್ಷದಲ್ಲಿ 165 ಸೈಬರ್ ಪ್ರಕರಣಗಳು

Update: 2019-03-11 16:48 GMT

ದಾವಣಗೆರೆ, ಮಾ.11: ಜಿಲ್ಲೆಯಲ್ಲಿ ಕಳೆದ 2018ರ ಸಾಲಿನಲ್ಲಿ ಒಟ್ಟು 165 ಸೈಬರ್ ಪ್ರಕರಣಗಳು ದಾಖಲಾಗಿದೆ. ಹಣವನ್ನು ಕಳೆದುಕೊಂಡ ದೂರುದಾರರ ಖಾತೆಗೆ ಹಣ ಮರುಪಾವತಿ ಪ್ರಕರಣಗಳಲ್ಲಿ ಒಟ್ಟು 11,37,070 ರೂ. ಕಳೆದುಕೊಂಡಿದ್ದು, ಇದರಲ್ಲಿ 7,01,943 ರೂ.ಗಳನ್ನು ದೂರುದಾರರಿಗೆ ಮರುಪಾವತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ. 

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿಇಎನ್ (ಸೈಬರ್, ಎಕಾನಮಿಕ್ ನಾರ್ಕೋಟಿಕ್ ಕಂಟ್ರೋಲ್) ಅಪರಾಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದೇವರಾಜ ಟಿ.ವಿ ಹಾಗೂ ಸಿಬ್ಬಂದಿ ಸೈಬರ್ ಅಪರಾಧಗಳಾದ ಓಟಿಪಿ ಶೇರಿಂಗ್, ಸ್ಕಿಮ್ಮಿಂಗ್, ಜಾಬ್‌ಫ್ರಾಡ್, ಗಿಫ್ಟ್ ಫ್ರಾಡ್ ಮುಂತಾದ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಹಾಗೂ ಈ ನಿಟ್ಟಿನಲ್ಲಿ ಸಿಇಎನ್ ಅಪರಾಧ ಠಾಣೆಯಿಂದ ತಾಂತ್ರಿಕ ಕೌಶಲ್ಯಗಳನ್ನು ಬಳಸಿ ನೊಂದವರಿಗೆ ಹಣವನ್ನು ವಾಪಸ್ ಕೊಡಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ ಎಂದರು.

ಫೆಬ್ರವರಿ ತಿಂಗಳ ಅಂತ್ಯದವರೆಗೆ ದಾಖಲಾದ ಒಟ್ಟು 47 ಸೈಬರ್ ಪ್ರಕರಣಗಳಲ್ಲಿ 2,11,059 ರೂ. ಕಳೆದುಕೊಂಡಿದ್ದ ಪ್ರಕರಣಗಳ ಪೈಕಿ 1,00,216 ರೂ.ಗಳನ್ನು ದೂರುದಾರರಿಗೆ ಮರುಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ವತಿಯಿಂದ ಅನೇಕ ಶಾಲಾ-ಕಾಲೇಜ್‌ಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳು ಫೋನ್ ಮಾಡಿದಾಗ ತಮ್ಮ ಬ್ಯಾಂಕ್ ಮಾಹಿತಿಗಳನ್ನು ಮತ್ತು ಓಟಿಪಿ ನಂಬರ್‌ಗಳನ್ನು ಯಾವುದೇ ಕಾರಣಕ್ಕೂ ಅವರೊಂದಿಗೆ ಹಂಚಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಇಂತಹ ಪ್ರಕರಣಗಳು ನಡೆದ ತಕ್ಷಣ ಸಾರ್ವಜನಿಕರು ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯ ಕಟ್ಟಡದ 1ನೇ ಮಹಡಿಯಲ್ಲಿರುವ ಸಿಇಎನ್ ಅಪರಾಧ ಪೊಲೀಸ್ ಠಾಣೆ ಇಲ್ಲಿಗೆ ಬಂದು ದೂರು ನೀಡಬಹುದಾಗಿದೆ. ಪೊಲೀಸ್ ಠಾಣೆಯ ದೂ.ಸಂ.: 08192-225119 ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಮೊ: 8277981962 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

‘ಆನ್‌ಲೈನ್ ಮೂಲಕ ಹೆಚ್ಚು ವಂಚನೆ’
ಆರೋಪಿಗಳು ಫೋನ್ ಕರೆ ಮಾಡಿ ತಾವು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಬ್ಯಾಂಕ್ ಅಕೌಂಟ್ ಲಾಕ್ ಆಗಿದೆ, ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ನಿಮ್ಮ ಬ್ಯಾಂಕ್ ವ್ಯವಹಾರದ ಗೌಪ್ಯ ಮಾಹಿತಿ ಪಡೆದು ಮೊಬೈಲ್‌ಗೆ ಬರುವ ಒಟಿಪಿ ನಂಬರ್‌ಗಳ ಮಾಹಿತಿ ಪಡೆದು ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಾರೆ. ಇಂತಹ ಆನ್‌ಲೈನ್ ಮೂಲಕ ದೂರುದಾರರ ಖಾತೆಯಿಂದ ಹಣವನ್ನು ವಂಚಿಸುತ್ತಿರುವ ಪ್ರಕರಣಗಳಲ್ಲಿ ಹೆಚ್ಚಾಗಿ ಉತ್ತರ ಭಾರತದ ರಾಜ್ಯಗಳಾದ ಜಾರ್ಖಂಡ್, ಬಿಹಾರ್, ಉತ್ತರ ಪ್ರದೇಶ, ಹೆಹಲಿ, ಒರಿಸ್ಸಾದವರಾಗಿದ್ದು, ಆರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News