ಆನ್‌ಲೈನ್ ವ್ಯವಸ್ಥೆ ಜಾರಿ: ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2 ಕೋಟಿ ಉಳಿಕೆ

Update: 2019-03-11 17:01 GMT

ಬೆಂಗಳೂರು, ಮಾ.11: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಲ್ಲವನ್ನೂ ಆನ್‌ಲೈನ್ ವ್ಯವಸ್ಥೆ ಜಾರಿ ಮಾಡಿದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಎರಡು ಕೋಟಿ ರೂ.ಆದಾಯವನ್ನು ಉಳಿಕೆ ಮಾಡಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 48 ಲಕ್ಷ ಎ4 ಅಳತೆಯ ಹಾಳೆಗಳನ್ನು ಉಳಿಸಿದೆ. 2017-18ನೇ ಸಾಲಿನ ನಂತರ ಮಂಡಳಿ ವಿದ್ಯಾರ್ಥಿಗಳ ಪರೀಕ್ಷಾ ದಾಖಲಾತಿ, ಫಲಿತಾಂಶ ಘೋಷಣೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಳಿಗಾಗಿ ಆನ್‌ಲೈನ್ ವ್ಯವಸ್ಥೆ ಜಾರಿ ಮಾಡಿದ್ದರಿಂದ ಸಮಯ, ಹಣ ಮತ್ತು ಹಾಳೆ ಉಳಿತಾಯವಾಗುತ್ತಿದೆ.

ಆನ್‌ಲೈನ್ ವ್ಯವಸ್ಥೆಯಿಂದಾಗಿ 2017-18ರಲ್ಲಿ ಮತ್ತು 2018-19ನೆ ಸಾಲಿನಲ್ಲಿ ಸುಮಾರು 2 ಕೋಟಿ ಹಣ ನೇರ ಉಳಿತಾಯವಾಗಿದೆ ಎಂದು ಕೆಎಸ್‌ಇಇಬಿ ನಿರ್ದೇಶಕ ವಿ ಸುಮಂಗಲ ತಿಳಿಸಿದ್ದಾರೆ.

ಒಎಂಒರ್ ಶೀಟ್‌ಗಳನ್ನು ಭರ್ತಿ ಮಾಡುವುದು, ತಪ್ಪುಗಳನ್ನು ತಿದ್ದುವುದು ಮತ್ತು ಮರು ಪರಿಶೀಲನೆ ಹಾಗೂ ಪರೀಕ್ಷಾ ಪ್ರವೇಶ ಟಿಕೆಟ್ ಅನ್ನು ಶಾಲೆಗಳಿಗೆ ಕಳುಹಿಸುವ ಕೆಲಸ ಮೊದಲು ಕೈಯಿಂದಲೇ ಆಗುತ್ತಿತ್ತು. ಅವೆಲ್ಲವೂ ಎರಡು ವರ್ಷಗಳಿಂದೀಚೆಗೆ ಆನ್‌ಲೈನ್‌ನಲ್ಲಿ ಆಗುತ್ತಿದೆ. ವಿದ್ಯಾರ್ಥಿಗಳ ಸಾಧನೆ ಪತ್ತೆ ವ್ಯವಸ್ಥೆ(ಸ್ಯಾಟ್ಸ್)ಅನ್ನು ಪಿಡಿಎಫ್ ಮೂಲಕ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಹಾಳೆ ಉಳಿತಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News